ಬೆಂಗಳೂರು: ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಅದರಲ್ಲಿಯೂ 27 ಜಿಲ್ಲೆಗಳಲ್ಲಿ ಈ ಬಾರಿ ಮಳೆಯ ಅಬ್ಬರ ಜೋರಾಗಿದ್ದು, ಅನಾಹುತಗಳು ಸಂಭವಿಸಿವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ರಾಜ್ಯದ ಒಟ್ಟು 27 ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಪ್ರಸ್ತುತ ಮತ್ತೆ 820ಮಿ.ಮೀಟರ್ ಮಳೆಯಾಗಿದ್ದು, ರಾಮನಗರ, ಚಾಮರಾಜನಗರ, ಮಂಡ್ಯದಲ್ಲಿ 9 ಮಿ.ಮೀಟರ್ ಮಳೆಯಾಗಿದೆ. ಜೂನ್ ನಿಂದ ಈವರೆಗೆ 187 ಹಳ್ಳಿಗಳಿಗೆ ಮಳೆಯಿಂದಾಗಿ ಹಾನಿಯಾಗಿದೆ ಎಂದರು.
ರಾಜ್ಯದಲ್ಲಿ ಈ ಬಾರಿ ಮಳೆಯಿಂದಾಗಿ 96 ಜನರು ಮೃತಪಟ್ಟಿದ್ದಾರೆ. ಮೂವರು ನಾಪತ್ತೆಯಾಗಿದ್ದಾರೆ. ರಾಮನಗರದಲ್ಲಿಯೇ ಕಳೆದ 24 ಗಂಟೆಯಲ್ಲಿ ಮೂವರು ಸಾವನ್ನಪ್ಪಿದ್ದು, ಜಿಲ್ಲೆಯ ಹಲವು ಭಾಗಗಳು ಜಲಾವೃತಗೊಂಡಿವೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನೀರು ನಿಂತಿರಲು ಕೆರೆ ಒಡೆದಿರುವುದೇ ಕಾರಣ. ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕವಾಗಿ ಮಾಡಿಲ್ಲ, ಕೆರೆಯ ನೀರು ಹೆದ್ದಾರಿಗೆ ಬಂದಿರುವುದರಿಂದ ಹೀಗಾಗಿದೆ. ಹೆಚ್ಚು ಮಳೆಯಾಗುತ್ತಿರುವುದರಿಂದ ನೀರು ಇಂಗುತ್ತಿಲ್ಲ. ನೀರು ಸರಾಗವಾಗಿ ಹೋಗಲು ವ್ಯವಸ್ಥೆ ಮಾಡಲಾಗುತ್ತಿದೆ. ಸಂಬಂಧ ಪಟ್ಟ ಅಧಿಕಾರಿಗಳ ಜತೆ ಮಾತನಾಡಿದ್ದೇನೆ ಎಂದರು.