ಮೋಹಕ ತಾರೆ ರಮ್ಯಾ ರಾಜಕೀಯ ಕಾಲಿಟ್ಟ ಬಳಿಕ ಸಿನಿಮಾ ರಂಗದಿಂದ ಬಹುತೇಕ ದೂರವಿದ್ದರು. ಮಂಡ್ಯ ಸಂಸದೆಯಾಗಿದ್ದ ಅವರು ಈಗ ರಾಜಕಾರಣದಲ್ಲೂ ಅಷ್ಟೇನು ಸಕ್ರಿಯರಾಗಿಲ್ಲ. ಇದರ ಮಧ್ಯೆ ಅವರ ಮುಂದಿನ ರಾಜಕೀಯ ಭವಿಷ್ಯ ಹಾಗೂ ಚಿತ್ರರಂಗ ಪ್ರವೇಶ ಕುರಿತಂತೆ ವದಂತಿಗಳು ಹರಿದಾಡುತ್ತಲೇ ಇದ್ದವು.
ಇದೀಗ ಸ್ವತಃ ರಮ್ಯಾ ಅವರೇ ಟ್ವೀಟ್ ಒಂದನ್ನು ಮಾಡಿದ್ದು ಅದರಲ್ಲಿ, ನಾಳೆ ನಾನೊಂದು ಸಿಹಿ ಸುದ್ದಿ ಹಂಚಿಕೊಳ್ಳಲಿದ್ದೇನೆ. 11-15ಕ್ಕೆ ಈ ಕುರಿತ ಮಾಹಿತಿ ನೀಡುತ್ತೇನೆ. ನಾನು ಕೂಡ ಇದಕ್ಕಾಗಿ ಉತ್ಸುಕಳಾಗಿದ್ದೇನೆ ಎಂದು ತಿಳಿಸಿದ್ದು, ಇದು ಅಧಿಕೃತ ಎಂದು ಹೇಳಿದ್ದಾರೆ.
ಅವರ ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಹಲವು ಊಹೆಗಳಿಗೆ ಕಾರಣವಾಗಿದೆ. ಕೆಲವರು ರಮ್ಯಾ ಮದುವೆಯ ವಿಚಾರವನ್ನು ಹಂಚಿಕೊಳ್ಳಬಹುದು ಎಂದಿದ್ದರೆ ಮತ್ತೆ ಹಲವರು ಚಿತ್ರರಂಗ ಮರು ಪ್ರವೇಶ ಮಾಡಬಹುದೆಂಬ ಅನಿಸಿಕೆ ಹೇಳಿದ್ದಾರೆ.