ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆದಿದ್ದ ಯುವಕ ಪ್ರೇಮ್ ಸಿಂಗ್ ಎಂಬುವವರಿಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗೆ ನಿಷೇಧಿತ ಸಂಘಟನೆ ಜತೆ ಸಂಪರ್ಕವಿದೆ ಎಂದು ತಿಳಿದುಬಂದಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಯುವಕ ಪ್ರೇಮ್ ಸಿಂಗ್ ಗೆ ಚಾಕು ಇರಿತ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಗಳ (ತಡಗಟ್ಟುವಿಕೆ) 1967 ಕಾಯ್ದೆ-ಯುಎಪಿಎ ಅಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆಯನ್ನು ಎನ್ ಐ ಎ ಗೆ ಹಸ್ತಾಂತರಿಸುವ ಬಗ್ಗೆ ಪ್ರಕ್ರಿಯೆ ನಡೆದಿದೆ. ಎನ್ ಐ ಎ ಗೆ ವಹಿಸುವವರೆಗೂ ನಮ್ಮ ಪೊಲೀಸರು ತನಿಖೆ ನಡೆಸುತ್ತಾರೆ ಎಂದರು.
ಶಿವಮೊಗ್ಗದಲ್ಲಿ ಸಾವರ್ಕರ್ ಭಾವಚಿತ್ರ ತೆರವು ವಿವಾದದ ಬೆನ್ನಲ್ಲೇ ಯುವಕ ಪ್ರೇಮ್ ಸಿಂಗ್ ಎಂಬಾತನಿಗೆ ಚಾಕು ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದರು. ಪ್ರಕರಣ ಸಂಬಂಧ ತನ್ವೀರ್ ಅಹ್ಮದ್, ನದೀಮ್ ಫೈಜಲ್, ಅಬ್ದುಲ್ ರೆಹಮಾನ್ ಹಾಗೂ ಮೊಹಮ್ಮದ್ ಜಬಿ ಅಲಿಯಾಸ್ ಚರ್ಬಿ ಎಂಬುವವರನ್ನು ಬಂಧಿಸಲಾಗಿದ್ದು, ಯುಎಪಿಎ ಅಡಿ ಪ್ರಕರಣ ದಾಖಲಾಗಿದೆ.