ಚಿತ್ರದುರ್ಗ: ತಮ್ಮ ವಿರುದ್ಧದ ಆರೋಪ ಇದೊಂದು ಪಿತೂರಿ. ಕಳೆದ 15 ವರ್ಷಗಳಿಂದ ಮಠದಲ್ಲಿ ನಡೆದಿದ್ದ ಆಂತರಿಕ ಪಿತೂರಿ ಇದೀಗ ಬಹಿರಂಗವಾಗಿದೆ. ಭಕ್ತರು ಆತಂಕ ಪಡುವ ಅಗತ್ಯವಿಲ್ಲ. ಎಲ್ಲಾ ಆರೋಪಗಳಿಂದ ಮುಕ್ತನಾಗಿ ಹೊರಬರುತ್ತೇನೆ ಎಂದು ಮುರುಘಾ ಮಠದ ಡಾ. ಶಿವಮೂರ್ತಿ ಶರಣರು ತಿಳಿಸಿದ್ದಾರೆ.
ಮುರುಘಾಮಠದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು, ಮುರುಘಾಮಠದ ಶ್ರೀಗಳ ನೋವು ನಮ್ಮ ನೋವು ಎಂದು ಭಾವಿಸುತ್ತಿರುವ ಭಕ್ತರಿಗಾಗಿಯೇ ನಾವು ಧೈರ್ಯವಾಗಿರುತ್ತೇವೆ. ಬಂದಿರುವ ಸಂದರ್ಭವನ್ನು ಸಹನೆ, ಬುದ್ಧಿವಂತಿಕೆಯಿಂದ ಎಲ್ಲರೂ ಶಾಂತಿಯುತವಾಗಿ ಎದುರಿಸೋಣ. ಎಲರೂ ಒಗ್ಗಟ್ಟಾಗಿ ಹೋರಾಡೋಣ. ಭಕ್ತರು ಭಯಪಡುವ ಅಗತ್ಯವಿಲ್ಲ ಎಂದರು.
ಈಗ ಎದುರಾಗಿರುವ ಸಂದರ್ಭ ಹೊಸದೇನಲ್ಲ. ಕಳೆದ 15 ವರ್ಷಗಳಿಂದ ಮಠದಲ್ಲಿ ಆಂತರಿಕ ಪಿತೂರಿ ನಡೆಯುತ್ತಲೇ ಇದೆ. ಈಗ ಅದು ಬಹಿರಂಗವಾಗಿ ನಡೆದಿದೆ. ಈ ನೆಲದ ಕಾನೂನನ್ನು ಅರ್ಥಮಾಡಿಕೊಳ್ಳಬೇಕು. ನಾವು ಕಾನೂನನ್ನು ಗೌರವಿಸುವ ಮಠಾಧೀಶರು, ಪೀಠಾಧೀಶರಾಗಿದ್ದೇವೆ. ಬಂದಿರುವ ಸಂದರ್ಭದ ವಿಚಾರಣೆಗೆ ಎಲ್ಲಾ ರೀತಿ ಸಹಕಾರ ಕೊಡುತ್ತೇವೆ. ಪಲಾಯನವಾದದ ಪ್ರಶ್ನೆಯೇ ಇಲ್ಲ. ಎಲ್ಲಾ ಆರೋಪಗಳಿಂದ ಮುಕ್ತನಾಗಿ ಹೊರಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಾವುದೇ ಸಮಸ್ಯೆ ಎದುರಾದರೂ ಅದಕ್ಕೆ ಒಂದು ಅಂತ್ಯ ಎಂಬುದು ಇದ್ದೇ ಇರುತ್ತದೆ. ಹಾಗೇ ಈಗ ಎದುರಾಗಿರುವ ಸಮಸ್ಯೆ, ಸಂದರ್ಭಕ್ಕೂ ಒಂದು ತಾರ್ಕಿಕ ಅಂತ್ಯ ಎಂಬುದಿದೆ. ಬಂದಿರುವ ಸಮಸ್ಯೆಯನ್ನು ಎಲ್ಲರೂ ಒಗ್ಗಟ್ಟಾಗಿ ಎದುರಿಸಿ, ಶಾಶ್ವತವಾಗಿ ಪರಿಹರಿಸಿಕೊಳ್ಳೋಣ. ಸಂಕಷ್ಟ ಎದುರಾದಾಗಲೂ ಲಕ್ಷೋಪಲಕ್ಷ ಜನರು ನಮ್ಮೊಂದಿಗೆ ಇರುವುದು ಧೈರ್ಯ ತಂದಿದೆ ಎಂದು ಹೇಳಿದರು.