ಚಿತ್ರದುರ್ಗ: ಮುರುಘಾಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಗಳು ಸೇರಿದಂತೆ ಐವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಇಂದು ಸ್ವಾಮೀಜಿಯವರನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಮಧ್ಯೆ ನಿನ್ನೆ ಮುರುಘಾಶ್ರೀಗಳು ಹಾಗೂ ಕೆಲ ಮುಖಂಡರು ಸಭೆ ನಡೆಸಿದ್ದು, ಸಭೆಯಲ್ಲಿ ಶ್ರೀಗಳು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಶ್ರೀಗಳು ನಾವು ಸಂಧಾನಕ್ಕೂ ಸಿದ್ಧ, ಸಮರಕ್ಕೂ ಸಿದ್ಧ. ಸಂಧಾನ ವಿಫಲವಾದಾಗ ಸಮರ ಇದ್ದೇ ಇದೇ. ಈ ಹಿಂದೆ ಹಲವು ಸ್ವಾಮೀಜಿಗಳ ವಿರುದ್ಧ ಆರೋಪ ಕೇಳಿಬಂದಿತ್ತು. ಆಗೆಲ್ಲ ನಾವು ಕೂಡ ಅವರಿಗೆ ಧೈರ್ಯ ತುಂಬಿದ್ದೆವು. ಕೆಲ ಸಂದರ್ಭಗಳಲ್ಲಿ ಇಂತಹ ಆರೋಪಗಳು ಸಹಜ ನಾವು ಧೈರ್ಯಕಳೆದುಕೊಂಡಿಲ್ಲ ಎಂದು ಹೇಳಿದ್ದಾರೆ.
ಸ್ವಾಮಿಜಿ ಸಂಧಾನಕ್ಕೂ ಸಿದ್ಧ ಸಮರಕ್ಕೂ ಸಿದ್ಧ ಎಂಬ ಮಾತುಗಳನ್ನು ಆಡಿರುವುದು ಇದೀಗ ಭಕ್ತವೃಂಧದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ತಪ್ಪು ಮಾಡಿಲ್ಲ ಎಂದ ಮೇಲೆ ಸಂಧಾನದ ಮಾತು ಯಾಕೆ? ಕಾನೂನು ಹೋರಾಟ ಮಾಡಬೇಕೇ ಹೊರತು ಸಂಧಾನ ಸರಿಯಲ್ಲ ಎಂದು ಸಾರ್ವಜನಿಕರು, ಭಕ್ತರು ಕೂಡ ಹೇಳುತ್ತಿದ್ದಾರೆ. ಒಟ್ಟಾರೆ ಸ್ವಾಮಿಯವರ ಸಂಧಾನ ಎಂಬ ಮಾತು ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.