ಇದು ಸೋಶಿಯಲ್ ಮೀಡಿಯಾ ಜಮಾನಾ . ಇಲ್ಲಿ ಯೂಟ್ಯೂಬ್‌ನಲ್ಲೋ, ಫೇಸ್‌ಬುಕ್‌ನಲ್ಲೋ, ಇಲ್ಲಾ ಇನ್ಸ್ಟಾಗ್ರಾಮ್‌ನಲ್ಲಿ ಫಾಲೋವರ್ಸ್ ಹೆಚ್ಚಾದ್ರೆ ಸಾಕು. ಅವರು ರಾತ್ರೋ ರಾತ್ರಿ ಸ್ಟಾರ್ಸ್ ಆಗ್ಬಿಡ್ತಾರೆ. ಹೀಗೆ ಫೇಮಸ್ ಆಗೋದಕ್ಕೆನೇ ಜನರು ಹೊಸ ಹೊಸ ಕಂಟೆಂಟ್ ಹುಡುಕುತ್ತಾರೆ. ಅದಕ್ಕಾಗಿ ಏನೇನೋ ಹುಚ್ಚಾಟಗಳನ್ನ ಮಾಡಿದ್ದವರು ಇದ್ದಾರೆ. ಇಲ್ಲೊಬ್ಬ ಮಹಾನುಭಾವ ಆರು ಹಾವು ಹಾಗೂ ಊಸರವಳ್ಳಿಯನ್ನೇ ತಂದು ಮನೆಯಲ್ಲಿ ಇಟ್ಟುಕೊಂಡಿದ್ದ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದೆ. ಆತನು ಈಗ ಪೊಲೀಸರ ಸ್ಪೆಷಲ್ ಗೆಸ್ಟ್.
31 ವರ್ಷದ ಯೂಟ್ಯೂಬರ್ ರಾಮಚಂದ್ರ ರಾಣಾ ಅನ್ನೊ ವ್ಯಕ್ತಿಯನ್ನ ಒಡಿಶಾದ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ಧಾರೆ.
ಈತ ಸಂಬಾಲ್ಪುರ ಜಿಲ್ಲೆಯ ಕಂರಂಜುಲಾ ಪ್ರದೇಶದ ನಿವಾಸಿಯಾಗಿದ್ದು, ವಿಡಿಯೋ ಮಾಡುವುದಕ್ಕೋಸ್ಕರವೇ ಮನೆಯಲ್ಲಿ ಆರು ಹಾವುಗಳನ್ನ ತಂದು ಇಟ್ಟುಕೊಂಡಿದ್ದ. ಇವುಗಳಲ್ಲಿ ನಾಗರಹಾವುಗಳು ಸಹ ಇವೆ. ಜೊತೆಗೆ ಈತ ನಾಲ್ಕು ಊಸರವಳ್ಳಿಗಳನ್ನು ಕೂಡಾ ತನ್ನೊಂದಿಗೆ ಇರಿಸಿಕೊಂಡಿದ್ದ. ವಿಡಿಯೋದಲ್ಲಿ ಹಾವು ಮತ್ತು ಊಸರವಳ್ಳಿಗಳ ಮೂಲಕ ಹಾಗೂ ಬೇರೆ ಬೇರೆ ಸರೀಸೃಪಗಳನ್ನ ಇಟ್ಟುಕೊಂಡು ಜನರನ್ನ ಸೆಳೆಯುವುದಕ್ಕೋಸ್ಕರ ಬಳಸಿಕೊಳ್ಳುತ್ತಿದ್ದ. ಸದ್ಯಕ್ಕೆ ಯೂಟ್ಯೂಬ್ ಚಾನೆಲ್ನಲ್ಲಿ ಈತನಿಗೆ ಒಂದು ಲಕ್ಷ ಸಬ್‌ಸ್ಕ್ರೈಬರ್‌ಗಳಿದ್ದಾರೆ.
ಮಾಧ್ಯಮದ ಮುಂದೆ ರಾಣಾ ತಾನು ಮಾಡಿದ ತಪ್ಪನ್ನ ಒಪ್ಪಿಕೊಂಡಿದ್ದಾನೆ. ಅಲ್ಲದೇ ವಿಡಿಯೋ ಮಾಡಿದ ನಂತರ ಹಾವುಗಳನ್ನಾಗಲಿ, ಇಲ್ಲಾ ಬೇರೆ ಯಾವ ಸರೀಸೃಪಗಳನ್ನಾಗಲಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬರುವುದಾಗಿ ಹೇಳಿಕೊಂಡಿದ್ಧಾನೆ.
ವನ್ಯಜೀವಿಗಳನ್ನು ಬಳಸಿಕೊಂಡು ವಿಡಿಯೋ ಮಾಡುತ್ತಿರುವ ಬಗ್ಗೆ ಅರಣ್ಯ ಸಿಬ್ಬಂದಿಗೆ ಮಾಹಿತಿ ಬಂದ ಹಿನ್ನೆಲೆ ಅರಣ್ಯಾಧಿಕಾರಿಗಳು ದಾಳಿ ಮಾಡಿ, ಹಾವು ಸೇರಿದಂತೆ ಭಿನ್ನ ಭಿನ್ನ ಪ್ರಕಾರದ ಸರಿಸೃಪಗಳನ್ನ ವಶಕ್ಕೆ ಪಡೆದಿದ್ದೇವೆ ಎಂದ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ್ ಭಟ್ ಹೇಳಿದ್ದಾರೆ.