ಫುಡ್ ಚಾಲೆಂಜ್‌ಗಳ ಬಗ್ಗೆ ನೀವು ಕೇಳಿರ್ತೀರಾ. ಜಗತ್ತಿನ ಅತಿ ಖಾರದ ಮೆಣಸಿನಕಾಯಿ ತಿನ್ನುವ ಚಾಲೆಂಜ್, ರಾಗಿ ಮುದ್ದೆ, ಇಡ್ಲಿ ತಿನ್ನುವ ಚಾಲೆಂಜ್ ಹೀಗೆ ಹಲವು ಬಗೆಯ ಸ್ಪರ್ಧೆಗಳಿರುತ್ತವೆ. ದೆಹಲಿಯ ವಿವಿಧೆಡೆ ಇಂತಹ ಹತ್ತಾರು ಬಗೆಯ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.
ರಜನೀಶ್ ಗ್ಯಾನಿ ಎಂಬಾತ ಆರ್ ಯು ಹಂಗ್ರಿ ? ಎಂಬ ಫೇಸ್‌ಬುಕ್ ಪೇಜ್ ಮತ್ತು ಯೂಟ್ಯೂಬ್ ಚಾನೆಲ್ ಹೊಂದಿದ್ದಾನೆ. ಅಲ್ಲಿ ಅವನು ಇಂತಹ ಫುಡ್ ಚಾಲೆಂಜ್‌ಗಳನ್ನು ಸ್ವೀಕರಿಸುತ್ತಾನೆ. ಅದರಲ್ಲಿ ಗೆದ್ದವರು ಹಣ ಮತ್ತು ಇತರ ವಸ್ತುಗಳನ್ನು ಗೆಲ್ಲಲು ಅವಕಾಶವಿರುತ್ತದೆ.
ದೆಹಲಿಯ ಚೋಲೆ ಕುಲ್ಚಾ ರೆಸ್ಟೋರೆಂಟ್ ಒಂದರಲ್ಲಿ ವ್ಯಕ್ತಿಯೊಬ್ಬ ಈ ಫುಡ್ ಚಾಲೆಂಜ್ ಗೆದ್ದಿದ್ದಾನೆ. ಅರ್ಧ ಗಂಟೆಯೊಳಗೆ 21 ಪ್ಲೇಟ್ ಮಟರ್ ಕುಲ್ಚಾ ತಿನ್ನಬೇಕು ಅನ್ನೋದು ಸವಾಲು. ಇದನ್ನು ಪೂರ್ಣಗೊಳಿಸಿದರೆ ರೆಸ್ಟೋರೆಂಟ್ ನಿಮಗೆ 50,000 ರೂಪಾಯಿ ಹಣ ನೀಡುತ್ತದೆ. ಸವಾಲಿನಲ್ಲಿ ಸೋತರೆ ನೀವು 2100 ರೂಪಾಯಿ ಬಿಲ್ ಪಾವತಿಸಬೇಕು.
ಈಗ ಸವಾಲಿನಲ್ಲಿ ಗೆದ್ದವರಿಗೆ ಬುಲೆಟ್ ಬೈಕ್ ಅನ್ನು ಉಡುಗೊರೆಯಾಗಿ ನೀಡಲಾಗ್ತಿದೆ. ಫುಡ್ ಬ್ಲಾಗರ್ ಒಬ್ಬ ಎರಡು ದಿನಗಳ ಕಾಲ ಊಟ ಮಾಡದೇ ಈ ಚಾಲೆಂಜ್‌ನಲ್ಲಿ ಭಾಗವಹಿಸಿದ್ದಾನೆ. ಅರ್ಧಗಂಟೆಯೊಳಗೆ 21 ಪ್ಲೇಟ್ ಛೋಲೆ ಕುಲ್ಚಾ ತಿನ್ನುವಲ್ಲಿ ಯಶಸ್ವಿಯಾಗಿದ್ದಾನೆ. ಜೊತೆಗೆ ಆರೇಳು ಗ್ಲಾಸ್ ಲಸ್ಸಿಯನ್ನೂ ಕುಡಿದಿದ್ದಾನೆ. ತಿಂದಿದ್ದನ್ನು ಜೀರ್ಣಿಸಿಕೊಳ್ಳಲು ಅಲ್ಲೇ ಕಸರತ್ತು ಸಹ ಮಾಡಿದ್ದಾನೆ. ಸವಾಲಿನಲ್ಲಿ ಗೆದ್ದ ಆತನಿಗೆ ನಿಯಮದ ಪ್ರಕಾರ ರೆಸ್ಟೋರೆಂಟ್ ಮಾಲೀಕರು ಬುಲೆಟ್ ಬೈಕ್ ಕೊಟ್ಟಿದ್ದಾರೆ.
ಈ ಚಾಲೆಂಜ್ ಗೆದ್ದ ಎಲ್ಲರಿಗೂ ಬೈಕ್ ಕೊಡ್ತೀರಾ ಎಂಬ ಆತನ ಪ್ರಶ್ನೆಗೆ ಮಾಲೀಕರು ಇಲ್ಲ ಎಂದಿದ್ದಾರೆ. ಕೂಡಲೇ ಆತ ಬೈಕ್ ಕೀಯನ್ನು ರೆಸ್ಟೋರೆಂಟ್ ಮಾಲೀಕರಿಗೆ ಹಿಂದಿರುಗಿಸಿದ್ದಾನೆ. ಆತನ ಯುಟ್ಯೂಬ್ ಚಾನೆಲ್ ಚಂದಾದಾರರಲ್ಲಿ ಯಾರಾದರೂ ಈ ಚಾಲೆಂಜ್ ಗೆದ್ದರೆ ಅವರಿಗೆ ಬುಲೆಟ್ ಬೈಕ್ ಕೊಡುವುದಾಗಿ ಆತ ಘೋಷಿಸಿದ್ದಾನೆ. ಈ ವಿಡಿಯೋವನ್ನು ಸುಮಾರು 12 ಮಿಲಿಯನ್ ಜನರು ವೀಕ್ಷಿಸಿದ್ದಾರೆ.