ಮಂಗಳೂರು: 10 ರೂಪಾಯಿ ನಾಣ್ಯವನ್ನು ಸ್ವೀಕರಿಸಲು ನಿರಾಕರಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಅಲ್ಲದೇ ನಾಣ್ಯದ ಕುರಿತಾಗಿ ಅಪಪ್ರಚಾರ ಮಾಡುವುದು ಕೂಡ ಶಿಕ್ಷಾರ್ಹ ಅಪರಾಧವೆಂದು ಕೆನರಾ ಬ್ಯಾಂಕ್ ಪುತ್ತೂರು ವಿಭಾಗೀಯ ವ್ಯವಸ್ಥಾಪಕ ನರೇಂದ್ರ ರೆಡ್ಡಿ ಹೇಳಿದ್ದಾರೆ.
ಬಹುತೇಕರು 10 ರೂಪಾಯಿ ನಾಣ್ಯವನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ. ಇದು ಚಲಾವಣೆಯಲ್ಲಿ ಇಲ್ಲವೆಂದು ಅಪಪ್ರಚಾರ ಮಾಡುತ್ತಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ನರೇಂದ್ರ ರೆಡ್ಡಿ ಅವರು, ದೇಶಾದ್ಯಂತ 10 ರೂಪಾಯಿ ನಾಣ್ಯಗಳು ಚಲಾವಣೆಯಲ್ಲಿದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಂಯೋಜಿತ ಅಧಿಕೃತ ಚಲಾವಣೆಯ ನಾಣ್ಯಗಳಾಗಿವೆ. ಅಪಪ್ರಚಾರಕ್ಕೆ ಯಾರೂ ಕಿವಿಗೊಡದೆ 10 ರೂಪಾಯಿ ನಾಣ್ಯಗಳನ್ನು ದೈನಂದಿನ ವ್ಯವಹಾರದಲ್ಲಿ ಬಳಸುವಂತೆ ಅವರು ತಿಳಿಸಿದ್ದಾರೆ.
10 ರೂ. ನಾಣ್ಯದ ಕುರಿತಾಗಿ ಅಪಪ್ರಚಾರ ಮಾಡುವುದು ಮತ್ತು ಸ್ವೀಕರಿಸಲು ನಿರಾಕರಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಎಲ್ಲರೂ 10 ರೂಪಾಯಿ ನಾಣ್ಯವನ್ನು ಮುಕ್ತವಾಗಿ ಬಳಕೆ ಮಾಡುವಂತೆ ಅವರು ಕರೆ ನೀಡಿದರು.