ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಅವರು ಶುಕ್ರವಾರ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ ನಂತರ ಪಕ್ಷದೊಳಗೆ ಆಘಾತದ ಅಲೆ ಎದ್ದಿದೆ. ಈ ಬಗ್ಗೆ ಅಸಮಾಧಾನಗೊಂಡಿರುವ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಗುಲಾಂ ನಬಿ ಆಜಾದ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಗುಲಾಂ ನಬಿ ಆಜಾದ್ ಅವರು ಪಕ್ಷದಿಂದ ನಿರ್ಗಮಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಖರ್ಗೆ ಅವರು, 40 ವರ್ಷಗಳ ಕಾಲ ಅಧಿಕಾರ ಅನುಭವಿಸಿದ ನಂತರ ತನಗೆ ಎಲ್ಲವನ್ನೂ ನೀಡಿದ ಪಕ್ಷಕ್ಕೆ ಮೋಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪಕ್ಷವು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ಮತ್ತು ಭಾರತೀಯ ಜನತಾ ಪಕ್ಷ(ಬಿಜೆಪಿ) ಸಿದ್ಧಾಂತಗಳ ವಿರುದ್ಧ ಹೋರಾಡುತ್ತಿರುವ ನಿರ್ಣಾಯಕ ಸಮಯದಲ್ಲಿ ಗುಲಾಂ ನಬಿ ಆಜಾದ್ ಅವರು ಓಡಿಹೋಗಿದ್ದಾರೆ. ತನಗೆ ಎಲ್ಲವನ್ನೂ ನೀಡಿದ ಪಕ್ಷಕ್ಕೆ ಮೋಸ ಮಾಡಿದ್ದಾರೆ. ಅವರು ದ್ರೋಹಿ ಎಂದು ಟೀಕಿಸಿದ್ದಾರೆ.