ಮೈಸೂರು: ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ ಕಮಿಷನ್ ಆರೋಪ ಮಾಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಸರ್ಕಾರದ ಬಗ್ಗೆ ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡಿದೆ. ಪದೇ ಪದೇ ಸರ್ಕಾರದ ವಿರುದ್ಧ ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ಬಿಜೆಪಿ ನಾಯಕರು ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರಾಜ್ಯ ಸರ್ಕಾರದ ನಡೆ ಬಗ್ಗೆ ಅತ್ಯಂತ ಕೆಟ್ಟ ಅಭಿಪ್ರಾಯವಿದೆ. ಸರ್ಕಾರದ ಆಡಳಿತ ಯಂತ್ರದ ದುರ್ಬಳಕೆಯಾಗುತ್ತಿದೆ. ಈ ವಿಚಾರ ನನ್ನ ಮನಸ್ಸಿಗೆ ತುಂಬಾ ನೋವುಂಟುಮಾಡಿದೆ. ಗುತ್ತಿಗೆದಾರರು ನಿರಂತರವಾಗಿ ಸರ್ಕಾರದ ನಡೆಯ ಬಗ್ಗೆ ಚರ್ಚಿಸುತ್ತಿದ್ದಾರೆ ಎಂದರು.
ಸಣ್ಣ ಪ್ರಮಾಣದಲ್ಲಿ ಇದ್ದ ಭ್ರಷ್ಟಾಚಾರ ಈಗ ಹೆಚ್ಚಾಗಿದೆ. ಬಿಜೆಪಿ ಸರ್ಕಾರ ಬಂದ ಮೇಲೆ ಈ ಸ್ಥಿತಿ ಬಂದಿದೆ. ಕೆಂಪಣ್ಣ ಆರೋಪದಂತೆ ಕೆಲವರು ಕಮಿಷನ್ ಪಡೆದಿರುವುದು ನಿಜ. ನಾನು ಸಿಎಂ ಆಗಿದ್ದಾಗಲೂ ಕೆಲವರು ಕಮಿಷನ್ ಪಡೆದಿದ್ದಾರೆ. ಎಲ್ಲಾ ಪಕ್ಷದ ಶಾಸಕರು ಕೂಡ ಹಣ ವಸೂಲಿ ಮಾಡುತ್ತಿದ್ದಾರೆ. ಹಳ್ಳಿ ಹಳ್ಳಿಗಳಲ್ಲೂ ಗುತ್ತಿಗೆದಾರರು ಹುಟ್ಟಿಕೊಳ್ಳುತ್ತಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಮಿಷನ್ ದಂಧೆ ಮಿತಿ ಮೀರಿ ಹೋಗಿದೆ. ಬಿಜೆಪಿ ನಾಯಕರಿಗೆ ಅತ್ಮಹಸಾಕ್ಷಿ ಇದ್ದರೆ ಇದಕ್ಕೆ ಉತ್ತರಿಸಲಿ. ಹಿಂದೂತ್ವ, ರಾಮನ ಹೆಸರು ಹೇಳುವವರು ಇದಕ್ಕೆ ಉತ್ತರ ನೀಡಲಿ ಎಂದು ಸವಾಲು ಹಾಕಿದ್ದಾರೆ.