ಬ್ರಿಟನ್ ಮುಂದಿನ ಪ್ರಧಾನಿ ಎಂದೇ ಪರಿಗಣಿಸಲ್ಪಟ್ಟಿರುವ ಮುಂಚೂಣಿ ಅಭ್ಯರ್ಥಿ ರಿಷಿ ಸುನಾಕ್, ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರ ಜೊತೆಯಲ್ಲಿ ಮಂಗಳವಾರದಂದು ಲಂಡನ್ ನಲ್ಲಿ ಗೋಪೂಜೆ ನೆರವೇರಿಸಿದ್ದಾರೆ.
ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಪ್ರಬಲ ಅಭ್ಯರ್ಥಿಯಾಗಿರುವ 42 ವರ್ಷದ ರಿಷಿ ಸುನಾಕ್ ಈಗಾಗಲೇ ಹಲವು ಸುತ್ತುಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ, ಮಂಗಳವಾರದಂದು ಅವರು ಗೋ ಪೂಜೆ ನೆರವೇರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ರಿಷಿ ಸುನಾಕ್ ಹಾಗೂ ಅಕ್ಷತಾ ಮೂರ್ತಿ ಕಂಚಿನ ಪಾತ್ರೆಯನ್ನು ತಮ್ಮ ಕೈಯಲ್ಲಿಡಿದು ಪವಿತ್ರ ನೀರನ್ನು ಚಿಮುಕಿಸಿದ್ದಾರೆ. ಹಿನ್ನಲೆಯಲ್ಲಿ ಪುರೋಹಿತರು ಮಂತ್ರಘೋಷ ಮಾಡುತ್ತಿರುವುದು ಕೇಳಿಸುತ್ತಿದ್ದು, ವಿಧಿ ವಿಧಾನಗಳನ್ನು ಹೇಳುತ್ತಿದ್ದಾರೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸುಮಿತ್ ಅರೋರ ಎಂಬವರು ಹಂಚಿಕೊಂಡಿದ್ದು, ಯಾರು ? ರಿಷಿ ಸುನಾಕ್ (ಪ್ರಧಾನಿ ಅಭ್ಯರ್ಥಿ), ಎಲ್ಲಿ ? ಲಂಡನ್, ಇಂಗ್ಲೆಂಡ್, ಏನು ? ಗೋಪೂಜೆ ಎಂದು ಬರೆದುಕೊಂಡಿದ್ದು, ಇದು ನಮ್ಮ ಶ್ರೀಮಂತ ಸಂಸ್ಕೃತಿಯ ಪರಂಪರೆ ಈ ಕುರಿತು ಹೆಮ್ಮೆ ಪಡೋಣ ಎಂದಿದ್ದಾರೆ.
ಈ ಮೊದಲು ಸಹ ಜನ್ಮಾಷ್ಟಮಿಯಂದು ರಿಷಿ ಸುನಾಕ್, ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರ ಜೊತೆಗೂಡಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.