ಬೆಂಗಳೂರು: ಮುಂಬರುವ ಶೈಕ್ಷಣಿಕ ಸಾಲಿನಿಂದ ಶಾಲಾ ಶಿಕ್ಷಣದಲ್ಲಿ ಎನ್ಇಪಿ(ರಾಷ್ಟ್ರೀಯ ಶಿಕ್ಷಣ ನೀತಿ) ಜಾರಿಗೆ ತರಲಿದ್ದು, ಈ ನಿಟ್ಟಿನಲ್ಲಿ ನವೆಂಬರ್ ನಿಂದ ಮೊದಲ ಹಂತದಲ್ಲಿ 20,000 ಅಂಗನವಾಡಿ ಕೇಂದ್ರಗಳಲ್ಲಿ ಎನ್ಇಪಿ ಜಾರಿಗೊಳಿಸಲಾಗುತ್ತದೆ.
ಪ್ರಾಯೋಗಿಕವಾಗಿ ಅಂಗನವಾಡಿ ಕೇಂದ್ರಗಳಲ್ಲಿ ಎನ್ಇಪಿ ಜಾರಿಗೆ ನಿರ್ಧರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಮಾಹಿತಿ ನೀಡಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಉನ್ನತ ಶಿಕ್ಷಣದಲ್ಲಿ ಎನ್ಇಪಿ ಜಾರಿಗೊಳಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಶಿಕ್ಷಣದಲ್ಲಿಯೂ ಜಾರಿಗೊಳಿಸಲಿದ್ದು, ಮೊದಲ ಹಂತದಲ್ಲಿ ನವೆಂಬರ್ ನಿಂದ 20,000 ಅಂಗನವಾಡಿಗಳಲ್ಲಿ ಎನ್ಇಪಿ ಜಾರಿಗೊಳಿಸಲಾಗುವುದು.
ಬಾಲ್ಯಪೂರ್ವ ಆರೈಕೆ ಮತ್ತು ಶಿಕ್ಷಣ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವ ಮೂಲಕ ಮೂರನೇ ವರ್ಷದಿಂದಲೇ ಪ್ರತಿ ಮಗುವಿಗೂ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸಲಾಗುವುದು. ಮೂರರಿಂದ ಐದು ವರ್ಷಗಳ ಮಕ್ಕಳಿಗೆ ಶಿಕ್ಷಣದ ಜೊತೆಗೆ ಮಕ್ಕಳ ಆರೈಕೆಗೆ ಆದ್ಯತೆ ನೀಡಲಾಗುತ್ತದೆ. ಕರ್ನಾಟಕ ಶಾಲಾ ಹಂತದಲ್ಲಿಯೇ ಎನ್ಇಪಿ ಅನುಷ್ಠಾನದತ್ತ ಹೆಜ್ಜೆ ಇಟ್ಟ ಮೊದಲ ರಾಜ್ಯವಾಗಿದೆ. ಮುಂದಿನ ಶೈಕ್ಷಣಿಕ ಸಾಲಿನಿಂದ ಹಂತ ಹಂತವಾಗಿ ಶಾಲಾ ಶಿಕ್ಷಣದಲ್ಲಿ ಎನ್ಇಪಿ ಜಾರಿಗೊಳಿಸಲಾಗುವುದು ಎಂದು ಹೇಳಲಾಗಿದೆ.