ಕತ್ರಾ(ಜಮ್ಮು ಮತ್ತು ಕಾಶ್ಮೀರ): ಶುಕ್ರವಾರ ಬೆಳಗಿನ ಜಾವ ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿ ರಿಕ್ಟರ್ ಮಾಪಕದಲ್ಲಿ 3.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ(NCS) ಮಾಹಿತಿ ನೀಡಿದೆ.
ಇಂದು ಬೆಳಗಿನ ಜಾವ 3.28 ಕ್ಕೆ ಭೂಕಂಪ ಸಂಭವಿಸಿದೆ. ನೆಲದಿಂದ 5 ಕಿ.ಮೀ. ಆಳದಲ್ಲಿ ಭೂಕಂಪನವಾಗಿದೆ. ಭೂಕಂಪನ ತೀವ್ರತೆ 3.4 ರಷ್ಟು ಇದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಯಾವುದೇ ಹಾನಿಯಾಗಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಬುಧವಾರ ರಾತ್ರಿ ಒಂದು ಗಂಟೆಯ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಭೂಕಂಪಗಳು ಸಂಭವಿಸಿವೆ. ಆಗಸ್ಟ್ 24 ರಂದು ರಾತ್ರಿ 11:52 ರ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ಕತ್ರಾದಿಂದ 60 ಕಿಮೀ ದೂರದಲ್ಲಿ 3.2 ತೀವ್ರತೆಯ ಭೂಕಂಪ ಸಂಭವಿಸಿದೆ. ಇದಕ್ಕೂ ಮುನ್ನ ಬುಧವಾರ ರಾತ್ರಿ 11:04 ಗಂಟೆಗೆ ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿ ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.