ಶಿವಮೊಗ್ಗ: ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್, ಪಂಚಮಸಾಲಿ ಮಹಾಸಭಾ ಧರ್ಮಕ್ಷೇತ್ರ ಕೂಡಲಸಂಗಮ ಶಿವಮೊಗ್ಗ ಜಿಲ್ಲಾ ಘಟಕ ವತಿಯಿಂದ ಇಂದು ಲಿಂಗಾಯತ ಪಂಚಮಸಾಲಿ, ಲಿಂಗಾಯತ ಮಲೆಗೌಡ ಸಮುದಾಯವನ್ನು ಪ್ರವರ್ಗ ‘2ಎ’ ಮೀಸಲಾತಿಗೆ ಸೇರಿಸಬೇಕು ಎಂದು ಆಗ್ರಹಿಸಿ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಗೌರವಾಧ್ಯಕ್ಷರಾದ ಶ್ರೀ ಬಸವಮೃತ್ಯುಂಜನ ಸ್ವಾಮೀಜಿಗಳು ಸಂಸದ ಬಿ.ವೈ. ರಾಘವೇಂದ್ರ ಅವರ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮತ್ತು ಮುಖ್ಯಮಂತ್ರಿಗಳಿಗೆ ಜ್ಞಾಪನಾ ಪತ್ರವನ್ನು ನೀಡಿದರು.
ಇಲ್ಲಿನ ಶಿವಪ್ಪನಾಯಕ ವೃತ್ತದಲ್ಲಿ ಶಿವಪ್ಪನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಮೆರವಣಿಗೆಯ ಮೂಲಕ ಪಂಚಮಸಾಲಿ ಸಮಾಜದ ಬಾಂಧವರೊಂದಿಗೆ ಗೋಪಿವೃತ್ತದ ವರೆಗೆ ಪಾದಯಾತ್ರೆ ನಡೆಸಿ, ನಂತರ ಬಹಿರಂಗ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಕಳೆದ ಎರಡು ವರ್ಷಗಳಿಂದ ಕೂಡಲ ಸಂಗಮ ಪಂಚಮಸಾಲಿ ಪೀಠದಿಂದ ರಾಜ್ಯಾದ್ಯಂತ ನಿರಂತರವಾಗಿ ಲಿಂಗಾಯಿತ ಪಂಚಮ ಸಾಲಿ, ಮಲೆಗೌಡ ಲಿಂಗಾಯತ ಸಮುದಾಯವನ್ನು ರಾಜ್ಯ ಸರ್ಕಾರದ 2 ಎ ಮೀಸಲಾತಿಗೆ ಒಳಪಡಿಸಬೇಕು. ಹಾಗೂ ಎಲ್ಲಾ ಲಿಂಗಾಯತ ಸಮಾಜ ವನ್ನು ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕೆಂದು ಹಕ್ಕೊತ್ತಾಯದಿಂದ ಮೀಸಲಾತಿ ಚಳವಳಿ ನಡೆಸಲಾಗುತ್ತಿದೆ. ಈಗಾಗಲೇ 10 ಲಕ್ಷ ಜನ ರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡಿ ನಿರಂತರ ಪಾದಯಾತ್ರೆ ಮೂಲಕ ಹಕ್ಕೊತ್ತಾಯ ಮಾಡುವುದು, ರಾಜ್ಯದಾದ್ಯಂತ ಹರಿದು ಹಂಚಿ ಹೋಗಿರುವ ಪಂಚಮಸಾಲಿ ಸಮುದಾಯ ವನ್ನು ಒಗ್ಗೂಡಿಸುವುದು, ಇದರೆ ಲ್ಲದರ ನಡುವೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿಗೆ ಹೋರಾಟ ನಡೆಸಲಾಗುತ್ತಿದೆ ಆದರೆ ಸರ್ಕಾರ ನೀಡಿದ್ದ ಗಡುವು ಮುಗಿದಿದೆ ಎಂದರು.
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಸೆಪ್ಟೆಂಬರ್ 21, 2021 ರಲ್ಲಿ ಮೀಸಲಾತಿ ನೀಡುವ ಭರವಸೆ ನೀಡಿದ್ದರು. ಅವರು ಅಧಿಕಾರ ತ್ಯಾಗ ಮಾಡಿದ ಮೇಲೆ ಬಸವರಾಜ ಬೊಮ್ಮಾಯಿ ಸರ್ಕಾರ ಕೂಡ 3 ಬಾರಿ ಭರವಸೆ ನೀಡಿ ವಿಫಲವಾಗಿದೆ. ಕೊನೆಗೆ ಅನಿವಾರ್ಯವಾಗಿ ಮುಖ್ಯಮಂತ್ರಿಗಳ ಮನೆ ಮುಂಭಾಗ ಧರಣಿ ಕೂರುವ ತೀರ್ಮಾನ ಮಾಡಿದಾಗ ಸಂಧಾನ ಸಭೆ ನಡೆಸಿ ಎರಡು ತಿಂಗಳ ಕಾಲಾವಕಾಶ ಕೇಳಿದ್ದಲ್ಲದೇ, ಆಯೋಗ ರಚಿಸಿ ಸಮೀಕ್ಷೆಗೆ ತೀರ್ಮಾನ ಮಾಡಲಾಗಿತ್ತು. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಯುತ್ತಿದೆ ಎಂದರು.
ಸಮೀಕ್ಷೆಯ ವರದಿ ಬರುವ ಮುನ್ನ ಸರ್ಕಾರಕ್ಕೆ ಎಚ್ಚರಿಸುವ ನಿಟ್ಟಿನಲ್ಲಿ ವಿವಿಧ ಜಿಲ್ಲೆಗಳಲ್ಲಿ ಪ್ರತಿಜ್ಞಾ ಪಂಚಾಯತ್ ಅಭಿಯಾನ ಹಾಗೂ ಜಾಗೃತಿ ಸಭೆಗಳ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಕಾರ್ಯ ನಡೆಸಲಾಗುತ್ತಿದೆ. ಈಗಾಗಲೇ ಶಿವಮೊಗ್ಗ ಜಿಲ್ಲೆಯ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಬಹಿರಂಗ ಸಭೆ ನಡೆಸಲಾಗಿದೆ. ಇಂದು ಸಂಸದರ ಮೂಲಕ ಜ್ಞಾಪನಾ ಪತ್ರವನ್ನು ಕೂಡ ನೀಡಲಾಗಿದೆ ಸರ್ಕಾರ ಕೂಡಲೇ ಅಧಿವೇಶನದಲ್ಲಿ ನೀಡಿದ ಭರವಸೆಯಂತೆ ಮೀಸಲಾತಿಯನ್ನು ನೀಡಬೇಕು. ಕೊಟ್ಟ ಮಾತಿನಂತೆ ಮೀಸಲಾತಿ ನೀಡದಿದ್ದರೆ ಸೆ.26ರಂದು ಶಿಗ್ಗಾಂವಿಯ ಸಿಎಂ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಆಗ ಕೂಡ ಸರ್ಕಾರ ಮೀಸಲಾತಿ ನೀಡದಿದ್ದರೆ ಅಕ್ಟೋಬರ್ 23ರಂದು ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಸುಮಾರು 25 ಲಕ್ಷ ಪಂಚಮಸಾಲಿ ಬಾಂಧವರೊಂದಿಗೆ ‘ಮಾಡು ಇಲ್ಲವೇ ಮೀಸಲಾತಿ ಪಡೆದು ಮಡಿ’ ಎಂಬ ಘೋಷಣೆಯೊಂದಿಗೆ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಪ್ರತಿ ಬಾರಿ ಯಡಿಯೂರಪ್ಪನವರು ಚುನಾವಣಾ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಪಂಚಮಸಾಲಿ ಲಿಂಗಾಯತ ಮಲೆಗೌಡ ಸಮಾಜವನ್ನು 2ಎ ಮೀಸಲಾತಿಗೆ ಸೇರಿಸಲಾಗುವುದು ಎಂದು ಭರವಸೆ ನೀಡಿದ್ದರೂ ಭರವಸೆಯನ್ನು ಮರೆತಿದ್ದಾರೆ. ಕೊಟ್ಟ ಮಾತಿನಂತೆ ಮೀಸಲಾತಿ ನೀಡದಿದ್ದರೆ ಅಧಿವೇಶನದಲ್ಲಿ ಈ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಪಂಚಮಸಾಲಿ ಸಮಾಜದ ಆಶೀರ್ವಾದ ಕಳೆದುಕೊಳ್ಳಲಿದ್ದಾರೆ ಎಂದರು.
ಮಾಜಿ ಶಾಸಕ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಇದು 5ನೇ ಹಂತದ ಅಂತಿಮ ಹೋರಾಟ, ಈಗಾಗಲೇ ಎಲ್ಲಾ ಪಕ್ಷದ ಎಲ್ಲಾ ನಾಯಕರಿಗೆ ಸಮಾಜದ ಬಗ್ಗೆ ತಿಳಿಸಲಾಗಿದೆ. ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ತುಳಿತಕ್ಕೊಳಗಾದ ಸಮಾಜ ನಮ್ಮದು. ನಮ್ಮ ಮಕ್ಕಳು ಕೂಡ ವಿದ್ಯಾವಂತರಾಗಬೇಕು. ಐಎಎಸ್, ಐಪಿಎಸ್ ಆಗಬೇಕೆಂಬ ಹಂಬಲ ಎಲ್ಲರಿಗೂ ಇದೆ. ಇದು ಮಾಡು ಇಲ್ಲವೇ ಮಡಿ ಹೋರಾಟ. ಇನ್ನು ಕಾಯಲು ನಾವು ಸಿದ್ಧರಿಲ್ಲ. ತಕ್ಷಣ ಸ್ಪಂದಿಸದಿದ್ದರೆ ಪರಿಣಾಮ ಮುಂದಿನ ದಿನಗಳಲ್ಲಿ ಬೊಮ್ಮಾಯಿ ಸರ್ಕಾರ ಅನುಭವಿಸಲಿದೆ ಎಂದು ಎಚ್ಚರಿಸಿದರು.
ಇದಕ್ಕೂ ಮೊದಲು ಜ್ಞಾಪನ ಪತ್ರ ಸ್ವೀಕರಿಸಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಸರ್ಕಾರ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಗಮನಕ್ಕೆ ತಂದು ಬೇಡಿಕೆ ಈಡೇರಿಸಲು ಸರ್ವ ಪ್ರಯತ್ನ ಮಾಡಲಾಗವುದು ಎಂದರು. ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.