ಸರ್ಕಾರಿ ಉದ್ಯೋಗದಲ್ಲಿರುವವರು ಮೃತಪಟ್ಟ ವೇಳೆ ಅವರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವುದು ವಾಡಿಕೆ. ಆದರೆ ಇದಕ್ಕೆ ಕೆಲವೊಮ್ಮೆ ಬಹಳಷ್ಟು ಕಾಲಾವಧಿ ತೆಗೆದುಕೊಳ್ಳುತ್ತದೆ.
ಆದರೆ ವಿಶಿಷ್ಟ ಪ್ರಕರಣ ಒಂದರಲ್ಲಿ ಉದ್ಯೋಗಿ ಮೃತಪಟ್ಟ ಕೇವಲ 24 ಗಂಟೆಗಳಲ್ಲಿ ಅವರ ಅವಲಂಬಿತರಿಗೆ ನೌಕರಿ ದೊರೆತ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸಚಿನ್ ಮಹಾದೇವ ಬಾದಲೆ ಸೋಮವಾರದಂದು ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಅವರ ಸಹೋದರ ಬಸವರಾಜ ಮಹದೇವ ಬಾದಲೆ ಕುಟುಂಬ ನಿರ್ವಹಣೆಗಾಗಿ ತಮಗೆ ನೌಕರಿ ನೀಡಲು ಮನವಿ ಸಲ್ಲಿಸಿದ್ದರು.
ಇದನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಬಸವರಾಜ ಮಹದೇವ ಬಾದಲೆ ಅವರಿಗೆ ಚಿಕ್ಕೋಡಿ ತಹಶೀಲ್ದಾರ್ ಕಚೇರಿಯಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನಿಯುಕ್ತಿಗೊಳಿಸಿ ಮಂಗಳವಾರದಂದು ಆದೇಶ ಹೊರಡಿಸಿದ್ದಾರೆ.