ಹೈದರಾಬಾದ್: ಪ್ರವಾದಿ ಬಗ್ಗೆ ಬಿಜೆಪಿ ಶಾಸಕ ರಾಜಾಸಿಂಗ್ ಅವಹೇಳನಕಾರಿ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಂಪಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ರಾಜಾ ಸಿಂಗ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ನಂತರ ಜಾಮೀನು ಮಂಜೂರು ಮಾಡಿದೆ.
ಸಿ.ಆರ್.ಪಿ.ಸಿ. ಸೆಕ್ಷನ್ 41ರ ಪ್ರಕಾರ ನೋಟಿಸ್ ಜಾರಿ ಮಾಡಬೇಕಿತ್ತು, ಬಿಜೆಪಿ ಶಾಸಕ ರಾಜಸಿಂಗ್ ಅವರಿಗೆ ಯಾವುದೇ ನೋಟಿಸ್ ನೀಡದ ಹಿನ್ನೆಲೆಯಲ್ಲಿ ಕೋರ್ಟ್ ನಲ್ಲಿ ಪೊಲೀಸರ ಕ್ರಮವನ್ನು ಶಾಸಕರ ಪರ ವಕೀಲರು ಪ್ರಶ್ನಿಸಿದ್ದರು.
ಶಾಸಕ ರಾಜಾ ಸಿಂಗ್ ಪರ ವಕೀಲರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ನ್ಯಾಯಾಂಗ ಬಂಧನದ ಆದೇಶ ಹಿಂಪಡೆದು, ಜಾಮೀನು ಮಂಜೂರು ಮಾಡಿದೆ. ಹೈದರಾಬಾದ್ ನ ನಾಂಪಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ನಿಂದ ಜಾಮೀನು ಮಂಜೂರು ಮಾಡಲಾಗಿದ್ದು, ಕೂಡಲೇ ಬಿಡುಗಡೆಗೆ ಆದೇಶ ನೀಡಿದೆ.
ಹೈದರಾಬಾದ್ ನ ಗೋಶಾಮಹಲ್ ಬಿಜೆಪಿ ಶಾಸಕ ರಾಜಾ ಸಿಂಗ್ ಪ್ರವಾದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಿಜೆಪಿ ಅವರನ್ನು ಸಸ್ಪೆಂಡ್ ಮಾಡಿದೆ.