ಬೆಂಗಳೂರು: ಆಗಸ್ಟ್.26ರಂದು ಕಾಂಗ್ರೆಸ್ ಹಮ್ಮಿಕೊಂಡಿದ್ದ ಮಡಿಕೇರಿ ಚಲೋ ಪ್ರತಿಭಟನೆಯನ್ನು ಮುಂದೂಡುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ವಿಪಕ್ಷ ನಾಯಕನ ಕಾರಿನ ಮೇಲೆ ಮೊಟ್ಟೆ ಎಸೆತ, ಕಪ್ಪು ಬಾವುಟ ಪ್ರದರ್ಶನ, ಪೊಲೀಸ್ ಇಲಾಖೆ ವೈಫಲ್ಯ ಖಂಡಿಸಿ ಮಡಿಕೇರಿ ಚಲೋ ನಡೆಸಲು ಕಾಂಗ್ರೆಸ್ ನಿರ್ಧರಿಸಿತ್ತು. ಆದರೆ ಕೊಡಗಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿರುವುದರಿಂದ ನಾವು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆ ಮುಂದೂಡುತ್ತಿದ್ದೇವೆ ಎಂದರು.
ಜಿಲ್ಲಾಧಿಕಾರಿ ಆದೇಶ ಎಂದರೆ ಸರ್ಕಾರದ ಆದೇಶ. ಜವಾಬ್ದಾರಿಯುತ ಪ್ರತಿಪಕ್ಷವಾಗಿ ಸರ್ಕಾರದ ಆದೇಶ ಪಾಲಿಸುವುದು ನಮ್ಮ ಕರ್ತವ್ಯ. ನಾವು ಕಾನೂನು ಉಲ್ಲಂಘನೆ ಮಾಡುವುದಿಲ್ಲ. ಹಾಗಾಗಿ ಆ.26ರಂದು ಹಮ್ಮಿಕೊಂಡಿದ್ದ ಮಡಿಕೇರಿ ಚಲೋ ಪ್ರತಿಭಟನೆ ಮುಂದೂಡಲಾಗುವುದು. ಮುಂದಿನ ದಿನಾಂಕದ ಬಗ್ಗೆ ಕಾಂಗ್ರೆಸ್ ನಾಯಕರೊಂದಿಗೆ ಚರ್ಚಿಸಿ ತೀರ್ಮಾನಿಸುವುದಾಗಿ ತಿಳಿಸಿದರು.