ಬೆಂಗಳೂರು: ಅತಿವೃಷ್ಟಿ ಹಾನಿ ಸಮೀಕ್ಷೆಗಾಗಿ ನಾನು ಕೊಡಗಿಗೆ ಹೋಗಿದ್ದೆ. ನನ್ನ ವಿರುದ್ಧ 5-6 ಕಡೆಗಳಲ್ಲಿ ಪ್ರತಿಭಟನೆ ಮಾಡಿಸಿದ್ದಾರೆ. ಗುಪ್ತಚರ ಇಲಾಖೆಗೆ ಈ ಬಗ್ಗೆ ಮಾಹಿತಿ ಇರಲಿಲ್ಲವೇ ? ಪ್ರತಿಭಟನೆ, ಮೊಟ್ಟೆ ಎಸೆತ ನಡೆಯುತ್ತಿದ್ದರೂ ಎಸ್ ಪಿ ಸುಮ್ಮನೆ ನಿಂತಿದ್ದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕೊಡಗಿಗೆ ಭೇಟಿ ನೀಡಿದಾಗ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು ಆದರೂ ಪೊಲೀಸರು ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಯಾರೋ ಒಬ್ಬ ಕಾರಿನೊಳಗೆ ಪಾಂಪ್ಲೆಟ್ ಎಸೆದಿದ್ದಾನೆ. ಆದರೂ ಪೊಲೀಸರು ಸುಮ್ಮನಿದ್ದರು. ಬಳಿಕ ಕಾರಿನ ಮೇಲೆ ಮೊಟ್ಟೆ ಎಸೆದಿದ್ದಾರೆ ಆದರೂ ಪೊಲೀಸರು ನಿಷ್ಕ್ರಿಯರಾಗಿದ್ದರು. ಇದರಿಂದಾಗಿ ನಮ್ಮ ಕಾರ್ಯಕರ್ತರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲ ಘಟನೆ ನಡೆಯುತ್ತಿದ್ದರೂ ಕೊಡಗು ಎಸ್ ಪಿ ಮೌನವಾಗಿ ನಿಂತಿದ್ದರು. ಇದು ಪೊಲೀಸ್ ಇಲಾಖೆಯ ವೈಫಲ್ಯವಲ್ಲದೇ ಇನ್ನೇನು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಪೊಲೀಸರು ನಮ್ಮ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಸ್ಥಳದಲ್ಲಿಯೇ ಇದ್ದ ಆರ್ ಎಸ್ ಎಸ್, ಬಜರಂಗದಳ ಕಾರ್ಯಕರ್ತರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಗುಪ್ತಚರ ಇಲಾಖೆಗೆ ಈ ಬಗ್ಗೆ ಮಾಹಿತಿ ಇರಲಿಲ್ಲವೇ ? ಸಂಪತ್ ಎಂಬಾತ ಮೊಟ್ಟೆ ಎಸೆದಿದ್ದಾನೆ. ಆತನನ್ನು ಬಂಧಿಸಿದ ಬಳಿಕ ಬಿಡಿಸಿದ್ದು ಶಾಸಕ ಅಪ್ಪಚ್ಚು ರಂಜನ್. ಈಗ ಸಂಪತ್ ಯಾರೆಂದು ಗೊತ್ತೇ ಇಲ್ಲ ಅಂತಿದ್ದಾರೆ. ಸಂಪತ್, ಅಪ್ಪಚ್ಚು ರಂಜನ್ ಜತೆ ಇರುವ ಫೋಟೋ ಇದೆ. ಬಿಜೆಪಿ ನಾಯಕರಿಗೆ ಹೊಟ್ಟೆ ಉರಿ ಹಾಗಾಗಿ ಇದನ್ನೆಲ್ಲ ಮಾಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.