ಫಿನ್ಲ್ಯಾಂಡ್ ಪ್ರಧಾನಿ ಸನ್ನಾ ಮರಿನ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಫಿನ್ನಿಷ್ ಪ್ರಧಾನ ಮಂತ್ರಿಯು ತನ್ನ ಸ್ನೇಹಿತರೊಂದಿಗೆ ಹಾಡು, ಡ್ಯಾನ್ಸ್ನೊಂದಿಗೆ ಪಾರ್ಟಿ ಮಾಡುತ್ತಿರುವುದು ವಿಡಿಯೊದಲ್ಲಿ ಕಾಣಿಸುತ್ತದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ನಂತರ, ಮರಿನ್ ಟೀಕೆಗಳನ್ನು ಎದುರಿಸಿದರು.
ಕೆಲವರು ಅವರು ಡ್ರಗ್ ಪರೀಕ್ಷೆಗೆ ಒಳಪಡಬೇಕೆಂದು ಒತ್ತಾಯಿಸಿದರು. ಈಗ, ಫಿನ್ಲ್ಯಾಂಡ್ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಮಹಿಳೆಯರು ಫಿನ್ಲ್ಯಾಂಡ್ ಪ್ರಧಾನಿಗೆ ತಮ್ಮ ಬೆಂಬಲವನ್ನು ತೋರಿಸಲು ನೃತ್ಯ ಮಾಡುತ್ತಿರುವ ವಿಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.
ಸಾಲಿಡಾರಿಟಿ ವಿತ್ ಸನ್ನಾ ಎಂಬ ಹ್ಯಾಶ್ಟ್ಯಾಗ್ ಬಳಸಿ ತಮ್ಮ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದು, ಹಾಡುವುದು, ಡ್ಯಾನ್ಸ್ ಮಾಡಿ ಆನಂದಿಸಿ ವಿಡಿಯೋ ಹಾಕುತ್ತಿದ್ದಾರೆ.
ಫಿನ್ಲ್ಯಾಂಡ್ ಪ್ರಧಾನಿಯವರು ತಮ್ಮ ವಿಡಿಯೋ ವೈರಲ್ ಆದ ಕೂಡಲೇ ತನ್ನ ವಿರುದ್ಧದ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಪಾರ್ಟಿ ವೇಳೆ ಮಾತ್ರ ಮದ್ಯ ಸೇವಿಸಿದ್ದೆ ಎಂದು ಹೇಳಿದ್ದಾರೆ. ವಿಡಿಯೋ ರೆಕಾರ್ಡ್ ಆಗುತ್ತಿರುವ ಬಗ್ಗೆ ತನಗೆ ತಿಳಿದಿತ್ತು ಎಂದಿರುವ ಅವರು ವಿಡಿಯೋ ಸಾರ್ವಜನಿಕವಾಗಿ ವೈರಲ್ ಆಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
36 ವರ್ಷದ ಸನ್ನಾ ಮರಿನ್ ಅವರು ವಿಶ್ವದ ಅತ್ಯಂತ ಕಿರಿಯ ಪ್ರಧಾನಿಯಾಗಿದ್ದಾರೆ. ಕಳೆದ ವರ್ಷ ಅವರು ಕೋವಿಡ್ ಪಾಸಿಟಿವ್ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕಕ್ಕೆ ಬಂದ ನಂತರ ಕ್ಲಬ್ಬಿಗೆ ಹೋಗಿದ್ದಕ್ಕಾಗಿ ಕ್ಷಮೆಯಾಚಿಸಿದ್ದರು.