ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅನ್ನೋದು ಇದಕ್ಕೆ ನೋಡಿ. ಆತ ಕೊಲೆ ಆರೋಪಿ ಆದರೂ ಆತನಿಗೆ ಯಾವುದೇ ಭಯ ಇರಲಿಲ್ಲ ಪೊಲೀಸರು ವಿಚಾರಣೆಗೆ ಅಂತ ಕರೆದುಕೊಂಡು ಹೋಗುತ್ತಿದ್ದರೂ ಪೊಲೀಸ್ ವ್ಯಾನ್ನಲ್ಲೇ ಕೂತು ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿದ್ದಾನೆ ಈ ಮಹಾನುಭಾವ. ಈ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸನಗರದಲ್ಲಿ ನಡೆದಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರೋಷನ್ ಝಾ, ಜೈಲು ಶಿಕ್ಷೆಗೆ ಒಳಗಾಗಿದ್ದಾನೆ. ಉಲ್ಲಾಸ ನಗರದ ನಿವಾಸಿಯಾಗಿರುವ ರೋಷನ್ ಝಾ, ಒಬ್ಬ ದರೋಡೆಕೋರನಾಗಿದ್ದು, ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ ಸುಲಿಗೆ ಸೇರಿದಂತೆ ಹಲವು ಪ್ರಕರಣಗಳು ಈತನ ಮೇಲೆ ದಾಖಲಾಗಿವೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನನ್ನ ಜೈಲಿನಿಂದ ಕಲ್ಯಾಣ ನ್ಯಾಯಾಲಯಕ್ಕೆ ಕರೆದೊಯ್ಯಲಾಗುತ್ತಿತ್ತು. ಜೈಲಿನಿಂದ ಹೊರಗೆ ಈತನ ಬೆಂಬಲಿಗರು ಈತನಿಗೆಂದೇ ಕೇಕ್ ಹಿಡಿದುಕೊಂಡು ಕಾಯುತ್ತಿದ್ದರು. ಆರೋಪಿ ಪೊಲೀಸ್ ವ್ಯಾನ್ನಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ ಬೆಂಬಲಿಗರು ಈತನ ಕೈಯಿಂದ ಕೇಕ್ ಕತ್ತರಿಸಿದ್ದಾರೆ.
ರೋಷನ್ ಝಾ ಬೆಂಬಲಿಗರು ಈ ಕೇಕ್ ಕಟ್ಟಿಂಗ್ ವಿಡಿಯೋವನ್ನು ತಮ್ಮ ತಮ್ಮ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡು ವಾಟ್ಸ್ಅಪ್ ಸ್ಟೇಟಸ್ ಹಾಕಿಕೊಂಡಿದ್ಧಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪೊಲೀಸರು ಆರೋಪಿಗೆ ಕೇಕ್ ಕತ್ತರಿಸಲು ಅವಕಾಶ ಮಾಡಿಕೊಟ್ಟಿದ್ದು, ಅಲ್ಲಿ ಅಪರಾಧಿ ಕೇಕ್ ಕಟ್ ಮಾಡುತ್ತಿದ್ದರೂ ನೋಡಿಯೋ ನೋಡದಂತೆ ಇರುವುದು ಹೊಸ ವಿವಾದಕ್ಕೆ ಕರಣವಾಗಿದೆ.