ಜನ್ಮಾಷ್ಟಮಿ ಆಚರಣೆಯ ಸಂದರ್ಭದಲ್ಲಿ ಕುಡುಕನೊಬ್ಬ ಮೊಸರು ಕುಡಿಕೆ ಒಡೆಯಲು 7 ಮಹಡಿಗಳನ್ನು ಹತ್ತಿದ ಪ್ರಸಂಗ ಮಹಾರಾಷ್ಟ್ರ ಥಾಣೆಯಲ್ಲಿ ನಡೆದಿದೆ.
ಥಾಣೆಯ ಉಲ್ಲಾಸ್ ನಗರದಲ್ಲಿ ಏಳನೇ ಮಹಡಿಯಲ್ಲಿ ಮಣ್ಣಿನ ಮಡಕೆಯನ್ನು ಕಟ್ಟಲಾಗಿತ್ತು. ಈ ಸಂಭ್ರಮಾಚರಣೆಗೆ ಗಣ್ಯರ ಬರುವಿಕೆಗೆ ಕಾಯಲಾಗುತ್ತಿತ್ತು. ಮಡಕೆ ಒಡೆದವರಿಗೆ ಬಹುಮಾನದ ಮೊತ್ತ ರೂ. 55,000 ಎಂದು ಘೋಷಿಸಲಾಗಿತ್ತು. ಇದನ್ನು ಕಂಡುಕೊಂಡ ಕುಡುಕ ಸಾಹಸ ಮಾಡಿದ್ದಾನೆ.
ರಾತ್ರಿ 11ರ ವೇಳೆಗೆ ಮದ್ಯದ ಅಮಲಿನಲ್ಲಿದ್ದ 22 ವರ್ಷದ ವ್ಯಕ್ತಿ ಕಟ್ಟಡದ ಏಳು ಮಹಡಿ ಹತ್ತಿ, ಮಡಕೆ ಕಟ್ಟಿದ್ದ ಹಗ್ಗಕ್ಕೆ ನೇತಾಡುತ್ತಾ ಮಡಕೆ ಇದ್ದಲ್ಲಿ ತಲುಪಿ ಮಡಕೆ ಒಡೆಯಲು ಪ್ರಯತ್ನ ನಡೆಸಿದ. ಕೆಳಗಿದ್ದ ಜನರ ಕೇಕೆ ಶಿಳ್ಳೆ ಅವನನ್ನು ಇನ್ನಷ್ಟು ಪ್ರೇರೇಪಿಸಿದಂತೆ ಕಾಣಿಸಿತು.
ಈ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಅವನನ್ನು ಬೆಂಬಲಿಸಿ ಪ್ರೇರೇಪಿಸುತ್ತಾರೆ. ವಾವ್ ಮೇರಾ ದೇಶ್ ಬದಲ್ ರಹಾ ಹೈ ಎಂದು ಒಬ್ಬರು ಕಾಮೆಂಟ್ ಸಹ ಮಾಡಿದ್ದಾರೆ.
ಸಂಘಟಕರು ತ್ವರಿತವಾಗಿ ಕ್ರಮ ಕೈಗೊಂಡು ಆ ವ್ಯಕ್ತಿಯನ್ನು ಸುರಕ್ಷಿತವಾಗಿ ಇಳಿಸಲು ಹಗ್ಗವನ್ನು ಬಿಚ್ಚಿದರು. ಸ್ಥಳದಲ್ಲಿ ನಿಯೋಜಿಸಲಾದ ಪೊಲೀಸರು ಭೋಲಾ ವಾಘಮಾರೆ ಎಂದು ಗುರುತಿಸಲಾದ ಆ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಈ ಪ್ರಕರಣ ಇಷ್ಟಕ್ಕೆ ನಿಲ್ಲಲಿಲ್ಲ. ಆತನನ್ನು ನ್ಯಾಯಾಲಕ್ಕೆ ಹಾಜರು ಮಾಡಿದಾಗ, ವಕೀಲರು ವಾದವೊಂದನ್ನು ಹೂಡಿ, ಸಂಘಟಕರು ಭೋಲಾ ಅವರಿಗೆ ಬಹುಮಾನದ ಮೊತ್ತ ರೂ. 55,000 ನೀಡಬೇಕು, ಮೊಸರು ಕುಡಿಕೆಯನ್ನು ಹೇಗೆ ಒಡೆಯಬೇಕು ಎಂದು ಸಂಘಟಕರು ಸೂಚಿಸಿಲ್ಲ ಎಂದು ವಾದಿಸಿದರು.