ಇಂದಿನ ಯಾಂತ್ರಿಕ ಜೀವನದಲ್ಲಿ ಆರೋಗ್ಯದಿಂದ ಇರಲು ಏನೆಲ್ಲ ಪ್ರಯತ್ನ ಪಡಬೇಕು ಎನ್ನುವ ಅನೇಕರ ಪ್ರಶ್ನೆಗೆ ಉತ್ತರ ದೊರೆತಿದ್ದು, ದಿನಕ್ಕೆ 22 ನಿಮಿಷ ವಾಕಿಂಗ್ ಮಾಡಿದರೆ ಸಾಕು ಹಲವು ಸಮಸ್ಯೆಗಳಿಂದ ದೂರವಿರಬಹುದಂತೆ.
ಹೌದು, ಸಂಶೋಧನೆಯಲ್ಲಿ ಈ ಅಂಶ ಬಹಿರಂಗಗೊಂಡಿದೆ. ಪ್ರತಿನಿತ್ಯ 22 ನಿಮಿಷ, ವಾರಕ್ಕೆ 150 ನಿಮಿಷದಂತೆ ವಾಕಿಂಗ್ ಮಾಡುವುದರಿಂದ, ಡಯಾಬಿಟಿಸ್, ಬಿಪಿ ಸೇರಿದಂತೆ ಕೆಲವು ಹೃದ್ರೋಗಗಳಿಂದ ದೂರವಿರಬಹುದು ಎನ್ನುವ ಅಂಶ ಬಹಿರಂಗಗೊಂಡಿದೆ. ಇಷ್ಟು ಮಾತ್ರವಲ್ಲದೇ ಒತ್ತಡ ಹಾಗೂ ಖಿನ್ನತೆಯಿಂದ ಹೊರಬರಲು ಇದು ಸಹಾಯವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಸುಮಾರು 13 ವರ್ಷ ನಡೆಸಿದ್ದ ಸಂಶೋಧನೆಯಲ್ಲಿ ಯುಕೆ ದೇಶದ 50 ಸಾವಿರ ಜನರ ಆರೋಗ್ಯದ ಮಾದರಿಯನ್ನು ಪಡೆಯಲಾಗಿತ್ತು. ಪ್ರತಿನಿತ್ಯ ವಾಕ್ ಮಾಡುವ ಶೇ.20 ರಷ್ಟು ಮಂದಿ ಹೆಚ್ಚು ಕಾಲ ಬದುಕಿದ್ದು, ಇತರರೊಂದಿಗೆ ಹೋಲಿಸಿದರೆ ಹೃದ್ರೋಗದಿಂದ ಶೇ.24 ರಷ್ಟು ಮಂದಿ ದೂರವಿದ್ದಾರೆ ಎಂದು ತಿಳಿದುಬಂದಿದೆ.
ವಾಕಿಂಗ್ ಮಾಡುವುದರಿಂದ ದೇಹದ ಎಲ್ಲ ಅಂಗಗಳಿಗೂ ವ್ಯಾಯಾಮವಾಗುವುದರಿಂದ, ಸಂಶೋಧನೆಯ ಅಂತಿಮದಲ್ಲಿ ತಜ್ಞರೊಬ್ಬರು ನಡಿಗೆಯನ್ನು ಅತ್ಯುತ್ತಮ ವ್ಯಾಯಾಮವೆಂದು ಅಭಿಪ್ರಾಯಪಟ್ಟಿದ್ದಾರೆ.