ಬೆಂಗಳೂರು: ನಿಷೇಧ ಇದ್ದರೂ ಯುವತಿಯರಿಗೆ ಅಶ್ಲೀಲ ಬಟ್ಟೆ ತೊಡಿಸಿ ಅವರಿಂದ ಡ್ಯಾನ್ಸ್ ಮಾಡಿಸಿ ಅಕ್ರಮವಾಗಿ ಸಂಪಾದನೆ ಮಾಡುತ್ತಿದ್ದ ಡ್ಯಾನ್ಸ್ ಬಾರ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ 19 ಯುವತಿಯರನ್ನು ರಕ್ಷಿಸಲಾಗಿದೆ. ಬ್ರಿಗೇಡ್ ರಸ್ತೆಯ ಡ್ಯಾನ್ಸ್ ಬಾರ್ ನಲ್ಲಿ ನಿಯಮ ಉಲ್ಲಂಘಿಸಿ ಯುವತಿಯರಿಗೆ ಅಶ್ಲೀಲ ಬಟ್ಟೆ ತೊಡಿಸಿ ಡಾನ್ಸ್ ಮಾಡಿಸಲಾಗುತ್ತಿತ್ತು. ಅನಧಿಕೃತವಾಗಿ ಡ್ಯಾನ್ಸ್ ಬಾರ್ ತೆರೆದು ಯುವತಿಯರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದಲ್ಲದೇ, ಪ್ರಚೋದನಾಕಾರಿ ಬಟ್ಟೆ ಧರಿಸಿ ಅಶ್ಲೀಲ ನೃತ್ಯ ಮಾಡಿಸಿ ಅಕ್ರಮವಾಗಿ ಹಣ ಸಂಪಾದನೆ ಮಾಡಲಾಗುತ್ತಿತ್ತು.
ಹೀಗೆ ಅಶ್ಲೀಲ ಉಡುಪು ಧರಿಸಿ ಡ್ಯಾನ್ಸ್ ಮಾಡುತ್ತಿದ್ದ ನೇಪಾಳದ ಇಬ್ಬರು, ದೆಹಲಿಯ ಮೂವರು, ಮಹಾರಾಷ್ಟ್ರದ ಇಬ್ಬರು, ಪಶ್ಚಿಮ ಬಂಗಾಳದ 10 ಹಾಗೂ ರಾಜ್ಯದ ಒಬ್ಬ ಯುವತಿ ಸೇರಿ 19 ಯುವತಿಯರನ್ನು ರಕ್ಷಿಸಲಾಗಿದೆ. 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.