ಹಾವೇರಿ: ಗುಂಡಿ ಬಿದ್ದ ರಸ್ತೆಯ ಅವ್ಯವಸ್ಥೆ ಮತ್ತು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷದಿಂದ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಪೋಷಕರು ಮುಖ್ಯಮಂತ್ರಿಗೆ ದೂರು ನೀಡಲು ಮಗುವಿನ ಮೃತದೇಹದೊಂದಿಗೆ ಬಂದ ಘಟನೆ ಹಾವೇರಿಯ ಪ್ರವಾಸಿ ಮಂದಿರದಲ್ಲಿ ನಡೆದಿದೆ.
ಮಗುವಿನ ಮೃತದೇಹದೊಂದಿಗೆ ಸಿಎಂ ಭೇಟಿಯಾದ ಪೋಷಕರು ಅಳಲು ತೋಡಿಕೊಂಡಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹಿರೇಬಾಸೂರು ಗ್ರಾಮದ ಬಸವರಾಜ್ ಮತ್ತು ಪೂರ್ಣಿಮಾ ದಂಪತಿಗೆ ಹಾವೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು. ಆಸ್ಪತ್ರೆಯ ಸಿಬ್ಬಂದಿ ಮಗುವಿನ ಆರೋಗ್ಯದ ಕುರಿತಾಗಿ ಯಾವುದೇ ಮಾಹಿತಿ ನೀಡದೆ ಡಿಸ್ಚಾರ್ಜ್ ಮಾಡಿದ್ದರು. ಭಾನುವಾರ ಬೆಳಿಗ್ಗೆ ಮಗುವಿನ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ಕೂಡಲೇ ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದಾರೆ.
ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಆಸ್ಪತ್ರೆಗೆ ಬರುವುದು ವಿಳಂಬವಾಗಿ ಮಾರ್ಗಮಧ್ಯದಲ್ಲೇ ಮಗು ಕೊನೆಯುಸಿರೆಳೆದಿದೆ. ಇದರಿಂದ ಆಕ್ರೋಶಗೊಂಡ ಪೋಷಕರು ಮಗುವಿನ ಮೃತದೇಹದೊಂದಿಗೆ ಪ್ರವಾಸಿ ಮಂದಿರಕ್ಕೆ ಆಗಮಿಸಿ ಸಿಎಂ ಭೇಟಿಯಾಗಿ ಅಳಲು ತೋಡಿಕೊಂಡಿದ್ದು, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ರಸ್ತೆಯನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.