ನಾಯಿಗಳು ಮನುಷ್ಯರೊಂದಿಗೆ ಅತ್ಯಂತ ಸುಲಭವಾಗಿ ಬೆರೆಯುವ ಜೀವಗಳು. ಮನುಷ್ಯ ಕೂಡಾ ನಾಯಿಯನ್ನ ಪ್ರಾಣಿ ಅಂತ ಅಂದುಕೊಳ್ಳುವುದಕ್ಕಿಂತ ಹೆಚ್ಚಾಗಿ ಗೆಳೆಯ, ಕುಟುಂಬದ ಸದಸ್ಯ ಅಂತ ಭಾವಿಸುತ್ತಾನೆ. ಈಗ ಇಂಟರ್ನೆಟ್ ಲೋಕದಲ್ಲಿ ಮನುಷ್ಯ ಮತ್ತು ನಾಯಿಯ ಬಾಂಧವ್ಯದ ಕುರಿತಾದ ವಿಡಿಯೋ ಒಂದು ವೈರಲ್ ಆಗಿದೆ.
ವ್ಯಕ್ತಿಯೊಬ್ಬ ನಾಯಿಯ ಜೊತೆ ಜೊತೆಯಲ್ಲಿ ದ್ವಿಚಕ್ರದಲ್ಲಿ ಓಡಾಡುವುದನ್ನ ನೋಡಬಹುದಾಗಿದೆ. ಅಸಲಿಗೆ ಆ ವ್ಯಕ್ತಿ ಡೊಮಿನೋಜ್ ಪಿಜ್ಜಾ ಕಂಪನಿಯ ಡಿಲೆವರಿ ಬಾಯ್. ಗ್ರಾಹಕರು ಆನ್ಲೈನ್ನಲ್ಲಿ ಬುಕ್ ಮಾಡಿರೋ ಪಿಜ್ಜಾ ಮನೆ ಮನೆಗೆ ಡಿಲೆವರಿ ಮಾಡುವುದೇ ಈತನ ಕಾಯಕ. ಹೀಗೆ ಡಿಲೆವರಿ ಮಾಡಲು ಈತ ಹೋದಲ್ಲೆಲ್ಲ ನಾಯಿ ಕೂಡಾ ಈತನ ಜೊತೆಗೆ ಹೋಗುತ್ತೆ. ಇದನ್ನ ಗಮನಿಸಿದ ಶಿವಾಂಗ್ ಅನ್ನುವವರು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡು ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋವನ್ನ ಹಾಕಿದ್ದಾರೆ.
ಶಿವಾಂಗ್ ಅವರು ಈ ವಿಡಿಯೋದಲ್ಲಿ ಶೀರ್ಷಿಕೆಯಲ್ಲಿ ಬರೆದುಕೊಂಡ ಸಾಲು ಮನಮುಟ್ಟುವಂತಿದೆ. “ಇದೊಂದು ಪರಿಶುದ್ಧವಾದ ಸ್ನೇಹದ ದೃಶ್ಯ. ಈ ನಾಯಿಯ ಹೆಸರು ಜ್ಯಾಕ್. ಈ ವ್ಯಕ್ತಿ ಪಿಜ್ಜಾ ಡಿಲೆವರಿ ಬಂದಾಗೆಲ್ಲ ಈ ನಾಯಿಯೂ ಆತನ ಜೊತೆ ಬರುತ್ತೆ. ಸದಾ ಈ ವ್ಯಕ್ತಿಯ ಜೊತೆ ಇರೋ ಈ ಶ್ವಾನ ತನ್ನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಯಾವಾಗಲು ವ್ಯಕ್ತಿಯೊಂದಿಗೆ ಬರುವಂತಿದೆ. ಈ ಶ್ವಾನ ಪ್ರಾಮಾಣಿಕತನದ ಕೆಲಸಕ್ಕೆ 10/10 ಅಂಕಗಳು“
ವಿಡಿಯೊವನ್ನು ಹಂಚಿಕೊಂಡಾಗಿನಿಂದ 1.3 ಮಿಲಿಯನ್ ವೀಕ್ಷಣೆಗಳು ಮತ್ತು 1.62 ಲಕ್ಷಕ್ಕೂ ಹೆಚ್ಚು ಲೈಕ್ಗಳು ಸಿಕ್ಕಿವೆ. ಇಬ್ಬರ ನಡುವಿನ ಈ ಅವಿನಾಭಾವ ಸಂಬಂಧಕ್ಕಾಗಿ ಬಳಕೆದಾರರು ತಮ್ಮದೇ ಆದ ಅಭಿಪ್ರಾಯಗಳನ್ನು ಹೇಳಿದ್ದಾರೆ. ನೆಟ್ಟಿಗರೊಬ್ಬರು, “ಈ ವಿಡಿಯೋ ಆರೋಗ್ಯಕರವಾಗಿದೆ. ದೇವರು ಈ ಶುದ್ಧ ಆತ್ಮಗಳನ್ನು ರಕ್ಷಿಸುತ್ತಾನೆ” ಎಂದು ಬರೆದಿದ್ದಾರೆ.
ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿ, “ಡೊಮಿನೋಸ್ನ ಗೌರವಾನ್ವಿತ ಉದ್ಯೋಗಿ” ಎಂದು ಹೇಳಿದ್ದಾರೆ. ಮಗದೊಬ್ಬರು ಕಾಮೆಂಟ್ ಮಾಡಿ ಬೆಲೆಕಟ್ಟಲಾಗದು. ಈ ಜೋಡಿಯು ನಾನಿರುವ ಸ್ಥಳದಲ್ಲಿ ಪಿಜ್ಜಾಗಳನ್ನು ವಿತರಿಸಬೇಕೆಂದು ನಾನು ಬಯಸುತ್ತೇನೆ” ಎಂದು ಹೇಳಿಕೊಂಡಿದ್ದಾರೆ.