ನೋಯ್ಡಾ: ಇಲ್ಲಿನ ಐಷಾರಾಮಿ ರೆಸಿಡೆನ್ಶಿಯಲ್ ಸೊಸೈಟಿಯಲ್ಲಿ ಮಹಿಳೆಯೊಬ್ಬರು ಸೆಕ್ಯೂರಿಟಿ ಗಾರ್ಡ್ ಮೇಲೆ ದೌರ್ಜನ್ಯ ಮತ್ತು ದೈಹಿಕ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆಕೆಯನ್ನು ಬಂಧಿಸಿದ್ದಾರೆ.
ಭವ್ಯಾ ರೈ ಎಂದು ಗುರುತಿಸಲಾದ ಮಹಿಳೆ ತನ್ನನ್ನು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗಲೂ ಕಾವಲುಗಾರನ ಕುತ್ತಿಗೆಯಿಂದ ಹಿಡಿದುಕೊಂಡು ಪೊಲೀಸರಿಗೆ ಕರೆ ಮಾಡುವಂತೆ ಹೇಳುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಕಂಡುಬಂದಿವೆ.
ಮಹಿಳೆ ಸೆಡಾನ್ ನಿಂದ ಕೆಳಗಿಳಿದು ಜೇಪೀ ವಿಶ್‌ಟೌನ್ ಸೊಸೈಟಿಯ ಪ್ರವೇಶ ದ್ವಾರದಲ್ಲಿ ಗಾರ್ಡ್‌ಗಳೊಂದಿಗೆ ವಾಗ್ವಾದಕ್ಕಿಳಿದಿದ್ದಾಳೆ. ಗೇಟ್ ತೆರೆಯಲು ತಡವಾಗಿ ಬಂದ ಕ್ಷುಲ್ಲಕ ವಿಷಯಕ್ಕೆ ಮಹಿಳೆ ಕಾವಲುಗಾರನೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದನ್ನು ಕಾಣಬಹುದು.
2 ನಿಮಿಷದ ಈ ವಿಡಿಯೋ ಹೊರಬಿದ್ದ ನಂತರ ನೋಯ್ಡಾ ಪೊಲೀಸರು ಕ್ರಮಕೈಗೊಂಡಿದ್ದಾರೆ. ಮಹಿಳೆ ಕಾವಲುಗಾರನ ಕೈ ಹಿಡಿದುಕೊಂಡು ಅವಾಚ್ಯ ಪದಗಳಿಂದ ನಿಂದಿಸಿದರೂ, ಸೆಕ್ಯೂರಿಟಿ ಗಾರ್ಡ್ ಭಾರೀ ಸಂಯಮ ತೋರಿ ಮಹಿಳೆಗೆ ಮನವಿ ಮಾಡುತ್ತಾರೆ. ಆದರೂ ಮಹಿಳೆ ಕಾವಲುಗಾರನ ನಿಂದಿಸಿ ಅತ್ಯಂತ ಅಸಭ್ಯ ಭಾಷೆಯಿಂದ ಬೈಯುತ್ತಾಳೆ. ಅಲ್ಲಿದ್ದವರು ಅವಳನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಾರೆ. ಅವಳು ಪದೇ ಪದೇ ಕಾವಲುಗಾರನ ಕಾಲರ್ ಹಿಡಿಯುತ್ತಾಳೆ. ಅಸಭ್ಯ ಸನ್ನೆ ಮಾಡಿ ಬೆದರಿಕೆ ಹಾಕಿ ಜನಾಂಗೀಯ ನಿಂದನೆ ಮಾಡಿದ್ದಾಳೆ.
ಮಹಿಳೆಯ ಅನುಚಿತ ವರ್ತನೆಯ ನಂತರ, ಗಾರ್ಡ್ ಅಸಮಾಧಾನಗೊಂಡು ಕೆಲಸ ತೊರೆಯುವ ಬಗ್ಗೆ ಮಾತನಾಡುತ್ತಾನೆ.
ಮಹಿಳೆ ಕುಡಿದ ಸ್ಥಿತಿಯಲ್ಲಿದ್ದಳು. ಸರಿಯಾಗಿ ನಿಲ್ಲಲು ಸಾಧ್ಯವಾಗಲಿಲ್ಲ ಎಂದು ಹಲ್ಲೆಗೊಳಗಾದ ಭದ್ರತಾ ಸಿಬ್ಬಂದಿ ಹೇಳಿದ್ದಾರೆ. ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾದ ನಂತರ ಎಫ್‌ಐಆರ್ ದಾಖಲಿಸಲಾಗಿದೆ.
ಭವ್ಯಾ ರೈ ಎಂಬ ಮಹಿಳೆ ಸಮಾಜದ ಭದ್ರತಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸುವ ವಿಡಿಯೋ ಗಮನಕ್ಕೆ ಬಂದ ನಂತರ ಭದ್ರತಾ ಸಿಬ್ಬಂದಿ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಭಾರ್ತಿ ಸಿಂಗ್ ಹೇಳಿದರು.
ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಘಟನೆಯನ್ನು ಖಂಡಿಸಿದ್ದಾರೆ. ನೋಯ್ಡಾ ಪೊಲೀಸರು ಮಹಿಳೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.