ನವದೆಹಲಿ: ಎಐಸಿಸಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.
ಅನಾರೋಗ್ಯದ ಕಾರಣ ಸೋನಿಯಾ ಗಾಂಧಿ ಅವರು ಎಐಸಿಸಿ ಅಧ್ಯಕ್ಷರಾಗಿ ಮುಂದುವರೆಯಲು ಆಸಕ್ತಿ ತೋರುತ್ತಿಲ್ಲ. ರಾಹುಲ್ ಗಾಂಧಿ ಕೂಡ ಕಾಂಗ್ರೆಸ್ ಅಧ್ಯಕ್ಷರಾಗಲು ಆಸಕ್ತಿ ವಹಿಸಿಲ್ಲ. ಪ್ರಿಯಾಂಕಾ ಗಾಂಧಿಯವರಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಒತ್ತಾಯ ಕೇಳಿ ಬಂದಿದೆ. ಆದರೆ, ಅವರ ನೇತೃತ್ವದಲ್ಲಿ ನಡೆದ ಉತ್ತರ ಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದ್ದರಿಂದ ಗಾಂಧಿ ಕುಟುಂಬದ ಹೊರಗಿನವರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಚರ್ಚೆ ನಡೆದಿದೆ.
ಜಿ23 ಬಂಡಾಯ ಗುಂಪಿನ ಕಾಂಗ್ರೆಸ್ ನಾಯಕರಲ್ಲಿ ಒಬ್ಬರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ. ಆದರೆ, ಗುಂಪಿನಲ್ಲಿರುವ ಬಹುತೇಕರು ಮಾಸ್ ಲೀಡರ್ ಗಳಲ್ಲ. ದೊಡ್ಡ ಪ್ರಮಾಣದಲ್ಲಿ ಮತ ಸೆಳೆಯುವ ವರ್ಚಸ್ಸು ಕೂಡ ಹೊಂದಿಲ್ಲ. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕು. ವಂಶ ಪಾರಂಪರ್ಯ ರಾಜಕಾರಣ ಆರೋಪದ ಹಿನ್ನೆಲೆಯಲ್ಲಿ ಗಾಂಧಿ ಕುಟುಂಬದ ಹೊರಗಿನ ಮತ್ತು ಗಾಂಧಿ ಪರಿವಾರಕ್ಕೆ ನಿಷ್ಠರಾದ ಖರ್ಗೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಅಭಿಪ್ರಾಯ ಕೇಳಿ ಬಂದಿದೆ ಎಂದು ಹೇಳಲಾಗಿದೆ.