ಗಣಪತಿಗೆ ಪ್ರಿಯವಾದ ಗರಿಕೆಯನ್ನು ಬಹುತೇಕ ಎಲ್ಲರೂ ಮನೆ ಮುಂದೆ ಬೆಳೆದಿರುತ್ತೇವೆ. ಧಾರ್ಮಿಕವಾಗಿ ಮಾತ್ರವಲ್ಲ ವೈಜ್ಞಾನಿಕವಾಗಿ ಮಹತ್ವವಿರುವ ಈ ಹುಲ್ಲಿನಲ್ಲಿ ಕ್ಯಾಲ್ಸಿಯಂ, ರಂಜಕ, ಫೈಬರ್ ಮತ್ತು ಪೊಟ್ಯಾಸಿಯಂ ಹೇರಳವಾಗಿದ್ದು ಔಷಧೀಯ ಕಾರಣಗಳಿಗೂ ಇದನ್ನು ಬಳಸುತ್ತಾರೆ.
ಸಂಶೋಧನೆಯೊಂದರ ಪ್ರಕಾರ ಗರಿಕೆ ಸೇವನೆಯಿಂದ ಮಧುಮೇಹಿಗಳ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು. ವಾರಕ್ಕೊಮ್ಮೆ ಗರಿಕೆ ಹುಲ್ಲನ್ನು ನೀರಿನಲ್ಲಿ ಕುದಿಸಿ ಅರ್ಧ ಪ್ರಮಾಣಕ್ಕೆ ಇಳಿಸಿ ರಸವನ್ನು ಸೇವಿಸಬೇಕು.
ಮೂತ್ರದಲ್ಲಿ ಸೋಂಕು, ಬಿಳಿಸ್ರಾವ ಸಮಸ್ಯೆ ಇರುವವರು ನಿತ್ಯ ಗರಿಕೆ ಹುಲ್ಲಿನ ರಸವನ್ನು ಮೊಸರಿನಲ್ಲಿ ಬೆರೆಸಿ ಸೇವಿಸಬೇಕು. ಇದರಿಂದ ಮಹಿಳೆಯರ ಹಲವು ಸಮಸ್ಯೆಗಳು, ಗರ್ಭಕೋಶದ ಸೋಂಕು, ಪಿಸಿಓಡಿ ಮತ್ತಿತರ ಸಮಸ್ಯೆಗಳು ದೂರವಾಗುತ್ತವೆ. ಗರ್ಭಿಣಿಯರು ಇದನ್ನು ಕುಡಿಯುವುದರಿಂದ ಹಾಲಿನ ಪ್ರಮಾಣವೂ ಹೆಚ್ಚುತ್ತದೆ.
ಇಳಿವಯಸ್ಸಿನವರಿಗೆ ಇದರ ಕಷಾಯ ಮಾಡಿ ಕುಡಿಯಲು ಕೊಟ್ಟರೆ ಅವರ ಜೀರ್ಣಕ್ರಿಯೆ ಸುಧಾರಿಸುತ್ತದೆ. ವಿಪರೀತ ಆಹಾರ ಸೇವನೆಯಿಂದ ಉಂಟಾಗುವ ಸಮಸ್ಯೆಗಳನ್ನು ನಿವಾರಿಸುತ್ತದೆ. ಮಲಬದ್ಧತೆಯನ್ನು ತಡೆಯುತ್ತದೆ.