ಮಡಿಕೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಈಗ ಮತ್ತೊಂದು ತಿರುವು ಸಿಕ್ಕಿದೆ. ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಆಪ್ತನಾಗಿದ್ದ ಬಿಜೆಪಿ ಕಾರ್ಯಕರ್ತ ಸಂಪತ್ ಎಂಬಾತ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಎಂದು ಮೊದಲು ಹೇಳಲಾಗಿತ್ತಾದರೂ ಇದೀಗ ಅಪ್ಪಚ್ಚು ರಂಜನ್ ಆತ ನಮ್ಮ ಪಕ್ಷದ ಕಾರ್ಯಕರ್ತನಲ್ಲ ಎಂದಿದ್ದಾರೆ.
ಎಲ್ಲಕ್ಕಿಂತ ಮುಖ್ಯ ಸಂಗತಿ ಎಂದರೆ ಮೊದಲು ಜೆಡಿಎಸ್ ನಲ್ಲಿದ್ದು, ಬಳಿಕ ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಎನ್ನಲಾಗಿದ್ದು, ಕೆಲ ದಿನಗಳಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ. ಸಂಪತ್ ತಮ್ಮ ಜೊತೆಗಿರುವ ಫೋಟೋ ವೈರಲ್ ಆದ ಬಳಿಕ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅಪ್ಪಚ್ಚು ರಂಜನ್, ರಾಮನವಮಿ ವೇಳೆ ಈತ ನನ್ನ ಜೊತೆ ಫೋಟೋ ತೆಗೆಸಿಕೊಂಡಿರಬಹುದು. ಆದರೆ ಆತ ನಮ್ಮ ಕಾರ್ಯಕರ್ತನಲ್ಲ. ಆತ ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿದ್ದಾರೆ.
ಇದೀಗ ಸಂಪತ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ಆ ಬಳಿಕ ಹೆಚ್ಚಿನ ಮಾಹಿತಿ ತಿಳಿದುಬರಲಿದೆ. ಮೂಲತಃ ಸೋಮವಾರಪೇಟೆಯವನಾದ ಸಂಪತ್ ಸಣ್ಣಪುಟ್ಟ ಗುತ್ತಿಗೆ ಕೆಲಸ ಮಾಡುತ್ತಿದ್ದು, ಜೊತೆಗೆ ರಾಜಕೀಯದಲ್ಲೂ ಗುರುತಿಸಿಕೊಳ್ಳಲು ಮುಂದಾಗಿದ್ದ ಎಂದು ತಿಳಿದುಬಂದಿದೆ.