ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು, ಆಗಸ್ಟ್ ಮೂರರಂದು ದಾವಣಗೆರೆಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಇದಕ್ಕೆ ರಾಜ್ಯದಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಮೂಲಗಳ ಪ್ರಕಾರ 10 ಲಕ್ಷ ಮಂದಿ ಇದರಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗಿದ್ದು, ಕಾರ್ಯಕ್ರಮಕ್ಕಾಗಿ 20 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.
ಇದರ ಮಧ್ಯೆ ಅಂದು ದಾವಣಗೆರೆಯಲ್ಲಿ ಮದ್ಯ ಮಾರಾಟವಾಗಿರುವ ಕುರಿತಂತೆ ಇಂಟರೆಸ್ಟಿಂಗ್ ಮಾಹಿತಿಯೊಂದು ಬಹಿರಂಗವಾಗಿದೆ. ಸಾಮಾಜಿಕ ಕಾರ್ಯಕರ್ತ ಕೆ.ಸಿ. ರಾಜಣ್ಣ ಎಂಬವರು ಮಾಹಿತಿ ಹಕ್ಕು ಕಾಯ್ದೆ ಅಡಿ ಆಗಸ್ಟ್ ಮೂರರಂದು ಮಾರಾಟವಾದ ಮದ್ಯದ ಕುರಿತ ವಿವರವನ್ನು ಕೇಳಿದ್ದರು. ಇದಕ್ಕೆ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ ಪ್ರತಿಕ್ರಿಯೆ ನೀಡಿದೆ.
ಆಗಸ್ಟ್ 3ರಂದು ದಾವಣಗೆರೆಯಲ್ಲಿ ಬರೋಬ್ಬರಿ 1,62,10,734 ರೂಪಾಯಿ ಮೌಲ್ಯದ 3,02,164 ಬಾಟಲ್ ಮದ್ಯ ಮಾರಾಟವಾಗಿದೆ ಎಂದು ತಿಳಿಸಲಾಗಿದ್ದು, ಸಾಮಾನ್ಯವಾಗಿ ಪ್ರತಿನಿತ್ಯ 30 ರಿಂದ 40 ಲಕ್ಷ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗುತ್ತಿತ್ತು ಎಂದು ಹೇಳಲಾಗಿದೆ. ಅಂದರೆ ಆ ದಿನದಂದು ಎಂದಿಗಿಂತಲೂ ಐದು ಪಟ್ಟು ಹೆಚ್ಚು ಮದ್ಯ ಮಾರಾಟವಾಗಿದೆ.