ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ದೇಶದ 11 ರಾಜ್ಯಗಳಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಲೈಂಗಿಕ ಪಾಲುದಾರರನ್ನು ಹೊಂದಿದ್ದಾರೆ ಎಂದು ಈ ಸಮೀಕ್ಷೆ ಬಹಿರಂಗಪಡಿಸಿದೆ. ಆದಾಗ್ಯೂ ಪುರುಷರು ತಮ್ಮ ಸಂಗಾತಿಗಳು ಅಥವಾ ಲಿವ್-ಇನ್ ಪಾಲುದಾರರಲ್ಲದವರೊಂದಿಗೆ ಲೈಂಗಿಕ ಸಂಬಂಧ ಹೊಂದುವ ವಿಚಾರದಲ್ಲಿ ಮಹಿಳೆಯರನ್ನು ಮೀರಿಸಿದ್ದಾರೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯನ್ನು 1.1 ಲಕ್ಷ ಮಹಿಳೆಯರು ಮತ್ತು 1 ಲಕ್ಷ ಪುರುಷರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಅನೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಿಳೆಯರ ಸರಾಸರಿ ಲೈಂಗಿಕ ಪಾಲುದಾರರ ಸಂಖ್ಯೆಯು ಪುರುಷರಿಗಿಂತ ಹೆಚ್ಚಾಗಿದೆ ಎಂಬುದು ಸಮೀಕ್ಷೆಯಲ್ಲಿ ದೃಢಪಟ್ಟಿದೆ. ರಾಜಸ್ತಾನ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ರಾಜ್ಯದಲ್ಲಿ ಓರ್ವ ಮಹಿಳೆ ಸರಾಸರಿ 3.1 ರಷ್ಟು ಲೈಂಗಿಕ ಪಾಲುದಾರರನ್ನು ಹೊಂದಿದ್ದಾರೆ.
ಪುರುಷರು 1.8ರಷ್ಟು ಲೈಂಗಿಕ ಪಾಲುದಾರರನ್ನು ಹೊಂದಿದ್ದಾರೆ. ಹರಿಯಾಣ ಎರಡನೇ ಸ್ಥಾನದಲ್ಲಿದ್ದರೆ, ಚಂಡೀಗಢ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಮಧ್ಯಪ್ರದೇಶ, ಅಸ್ಸಾಂ, ಕೇರಳ, ಲಕ್ಷದ್ವೀಪ, ಪುದುಚೇರಿ ಮತ್ತು ತಮಿಳುನಾಡು ನಂತರದ ಸ್ಥಾನ ಪಡೆದುಕೊಂಡಿವೆ. ದೇಶದ 28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳ 707 ಜಿಲ್ಲೆಗಳಲ್ಲಿ 2019-21ರ ನಡುವೆ ಈ ಸಮೀಕ್ಷೆಯನ್ನು ನಡೆಸಲಾಗಿದೆ.