ಬಾಲಿವುಡ್ ಸಿನೆಮಾದ ಕಥೆಯನ್ನೂ ಮೀರಿಸುವಂತಹ ನೈಜ ಘಟನೆಯೊಂದು ಬಿಹಾರದ ಬಂಕಾ ಜಿಲ್ಲೆಯಲ್ಲಿ ನಡೆದಿದೆ. ಒಂದಷ್ಟು ವಂಚಕರು ಒಟ್ಟಾಗಿ ಸೇರಿಕೊಂಡು ಸುಮಾರು 8 ತಿಂಗಳುಗಳಿಂದ ನಕಲಿ ಪೊಲೀಸ್ ಠಾಣೆಯನ್ನೇ ಸೃಷ್ಟಿಸಿಬಿಟ್ಟಿದ್ದಾರೆ. ಅಸಲಿ ಪೊಲೀಸ್ ಠಾಣೆಯಿಂದ ಕೇವಲ 500 ಮೀಟರ್ ದೂರದಲ್ಲಿ ಈ ನಕಲಿ ಪೊಲೀಸ್ ಸ್ಟೇಶನ್ ಇತ್ತು. ಗೆಸ್ಟ್ಹೌಸ್ ಒಂದನ್ನು ವಂಚಕರು ಪೊಲೀಸ್ ಠಾಣೆಯಾಗಿ ಪರಿವರ್ತಿಸಿದ್ದರು.
ಪೊಲೀಸರು ಈ ವಂಚಕರ ಜಾಲವನ್ನು ಬೇಧಿಸುವವರೆಗೂ ಅವರು ನಿರಾತಂಕವಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಕ್ರಿಮಿನಲ್ ಒಬ್ಬನನ್ನು ಸೆರೆಹಿಡಿಯಲು ಅಸಲಿ ಪೊಲೀಸರ ತಂಡ ಫೀಲ್ಡಿಗಿಳಿದಿತ್ತು. ಈ ವೇಳೆ ಬಿಹಾರ ಪೊಲೀಸ್ ಸಮವಸ್ತ್ರದಲ್ಲಿದ್ದ ಓರ್ವ ಪುರುಷ ಹಾಗೂ ಮಹಿಳೆ ಖಾಕಿಗಳ ಕಣ್ಣಿಗೆ ಬಿದ್ದಿದ್ದಾರೆ.
ಅನುಮಾನ ಬಂದು ಅವರನ್ನು ಪ್ರಶ್ನಿಸಿದಾಗ ನಕಲಿ ಪೊಲೀಸ್ ಠಾಣೆ ಪತ್ತೆಯಾಗಿದೆ. ಪೊಲೀಸರಿಗೆ ಸಿಕ್ಕಿಬಿದ್ದ ಅನಿತಾ ಯಾದವ್ ಮುರ್ಮು ತಾನು ಪೊಲೀಸ್ ಇನ್ಸ್ಪೆಕ್ಟರ್ ಅಂತಾ ಹೇಳಿಕೊಂಡಿದ್ಲು. ಮತ್ತೋರ್ವ ಅಶೋಕ್ ಕುಮಾರ್ ಮಾಂಜಿ ಪೇದೆಯೆಂದು ಬಿಂಬಿಸಿಕೊಂಡಿದ್ದ. ಲೈಸನ್ಸ್ ಇಲ್ಲದ ಕಂಟ್ರಿ ಮೇಡ್ ಪಿಸ್ತೂಲ್ ಕೂಡ ಅವರ ಬಳಿಯಿತ್ತು.
ಭೋಲಾ ಯಾದವ್ ಈ ಹಗರಣದ ಕಿಂಗ್ ಪಿನ್. ಬಿಹಾರ ಪೊಲೀಸ್ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಆತ ಇವರನ್ನೆಲ್ಲ ಕರೆತಂದಿದ್ದ. ಸಾವಿರಾರು ರೂಪಾಯಿ ಹಣವನ್ನೂ ಪಡೆದಿದ್ದ. ಗೆಸ್ಟ್ಹೌಸ್ನಲ್ಲಿ ಪೊಲೀಸ್ ಠಾಣೆಯ ವಾತಾವರಣವನ್ನೇ ಸೃಷ್ಟಿಸಿ ಅವರಿಗೆಲ್ಲ ಸಮವಸ್ತ್ರ, ನಕಲಿ ಬ್ಯಾಡ್ಜ್ಗಳನ್ನೆಲ್ಲ ಕೊಟ್ಟಿದ್ದಾನೆ. ಇತರ ಮೂವರು ಆರೋಪಿಗಳಾದ ರಮೇಶ್ ಕುಮಾರ್, ವಾಕಿಲ್ ಕುಮಾರ್ ಹಾಗೂ ಜೂಲಿ ಕುಮಾರ್ ಮಾಂಜಿಯನ್ನು ಸಹ ಪೊಲೀಸರು ಬಂಧಿಸಿದ್ದಾರೆ.