ಮಡಿಕೇರಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಪೊಲೀಸರು 9 ಜನರನ್ನು ಬಂಧಿಸಿದ್ದಾರೆ.
ಮನು, ಕೃಷ್ಣಪ್ಪ, ಮಂಜುನಾಥ್, ನಿತ್ಯಾನಂದ, ಪ್ರವೀಣ, ಗೌತಮ್, ಭಾಸ್ಕರ ನಾಯ್ಕ್, ಮಣಿಕಂಠ, ಲಕ್ಷ್ಮಿನಾರಾಯಣ ಬಂಧಿತ ಆರೋಪಿಗಳು. ಬಂಧಿತರನ್ನು ತಡರಾತ್ರಿ ಕುಶಾಲನಗರ ಜೆ ಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ ಕೋರ್ಟ್ ಎಲ್ಲಾ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.
ಈ ನಡುವೆ ತಮ್ಮ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ಈ ಸಂದರ್ಭದಲ್ಲಿ ಕೊಡಗು ಎಸ್ ಪಿ ಏನು ಮಾಡುತ್ತಿದ್ದರು? ಆ.26ರಂದು ಬೃಹತ್ ಪ್ರತಿಭಟನೆ ಮೂಲಕ ಎಸ್ ಪಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಕೊಡಗು ಜಿಲ್ಲಾ ಪ್ರವಾಸದ ಬಳಿಕ ಇಂದು ಸಿದ್ದರಾಮಯ್ಯ ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಿದ್ದು, ಮಳೆಹಾನಿ ಪ್ರದೇಶಗಳ ಪರಿವೀಕ್ಷಣೆ ನಡೆಸಿದ್ದಾರೆ.