ಮತ್ಸ್ಯ ಪ್ರಿಯರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸುದ್ದಿ, ಇನ್ನು ವರ್ಷದ 365 ದಿನವೂ ವೆರೈಟಿ-ವೆರೈಟಿ ಮೀನು ಊಟ ಮಾಡುವ ಅವಕಾಶ ಸಿಗಲಿದೆ. ಇದಕ್ಕೆ ಅವಕಾಶ ಮಾಡಿಕೊಡ್ತಿರೋದು ರಾಜ್ಯ ಸರ್ಕಾರ.
ರಾಜ್ಯದಲ್ಲಿ ಮತ್ಸ್ಯಕ್ರಾಂತಿಗೆ ಪೂರ್ವ ತಯಾರಿ ನಡೆದಿದ್ದು, ಒಳನಾಡು ಮೀನುಗಾರಿಕೆ ಚಟುವಟಿಕೆಗಳ ವಿಸ್ತರಣೆಯೊಂದಿಗೆ ಗರಿಷ್ಠ ಮೀನು ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಧ್ಯಮಗಳಿಗೆ ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್. ಅಂಗಾರ ತಿಳಿಸಿದ್ದಾರೆ.
“ಕೆ.ಆರ್.ಎಸ್, ಆಲಮಟ್ಟಿ, ಲಿಂಗನಮಕ್ಕಿ, ಭದ್ರಾ ಸೇರಿದಂತೆ ರಾಜ್ಯದ 12 ಪ್ರಮುಖ ಜಲಾಶಯಗಳಲ್ಲಿ ಗರಿಷ್ಠ ಪ್ರಮಾಣದ ಮೀನು ಉತ್ಪಾದನೆಗೆ ಅಗತ್ಯ ತಯಾರಿ ಈಗಾಗಲೇ ನಡೆಯುತ್ತಿದ್ದು, ”ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಡೆಂಜಿ, ಮರೆಂಜಿ ತಳಿಯಂತೆ ಪ್ರತಿ ಜಿಲ್ಲೆಯಲ್ಲೂ ವಿಶಿಷ್ಟವಾದ ತಳಿಯ ಮೀನುಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಹೊರ ರಾಜ್ಯಗಳಿಂದ ಮೀನು ಮರಿಗಳನ್ನು ತರಿಸಿಕೊಳ್ಳುವ ಅನಿವಾರ್ಯತೆ ಸಮಸ್ಯೆಗೆ ಪರಿಹಾರವಾಗಿ ರಾಜ್ಯದ ನಾನಾ ಭಾಗಗಳಲ್ಲಿ ಮೀನು ಮರಿ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಆಲಮಟ್ಟಿ ಜಲಾಶಯದಲ್ಲಿ ಮೀನು ಮರಿ ಸಾಕಾಣಿಕೆ ಕೇಂದ್ರಕ್ಕಾಗಿ 25 ಎಕರೆ ಜಾಗವನ್ನು ಒದಗಿಸಲು ಜಲಸಂಪನ್ಮೂಲ ಇಲಾಖೆ ಒಪ್ಪಿದೆ,” ಎಂದು ಸಚಿವ ಎಸ್. ಅಂಗಾರ ತಿಳಿಸಿದ್ದಾರೆ.
“ರಾಜ್ಯದಲ್ಲಿ ಮೀನಿನ ಊಟಕ್ಕೆ ಹೆಚ್ಚು ಬೇಡಿಕೆ ಇದ್ದು, ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಶುಚಿ ಮತ್ತು ರುಚಿಯಾದ ಮೀನಿನ ಊಟ ಒದಗಿಸಲು ಖಾಸಗಿ ಸಹಭಾಗಿತ್ವದಲ್ಲಿ ಎಲ್ಲ ಭಾಗಗಳಲ್ಲಿಯೂ ಮೀನು ಊಟದ ಮನೆಗಳನ್ನು ಸ್ಥಾಪನೆ ಮಾಡಲಾಗುವುದು, ಜೊತೆಗೆ ‘ಮೀನುಗಾರಿಕೆ ಇಲಾಖೆ ವತಿಯಿಂದ ಬೆಂಗಳೂರು ಸೇರಿದಂತೆ ಕೆಲವು ಕಡೆ ಮೀನು ಊಟದ ಹೋಟೆಲ್ ಸ್ಥಾಪನೆ ಮಾಡಿದ್ದರೂ, ಬೇಡಿಕೆ ಇರುವಷ್ಟು ಪ್ರಮಾಣದಲ್ಲಿ ವಿಸ್ತರಣೆ ಮಾಡಲು ಸಾಧ್ಯವಾಗಿಲ್ಲ. ಇನ್ನು ಮುಂದೆ ಖಾಸಗಿ ಸಹಭಾಗಿತ್ವದಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ಥಾಪನೆ ಮಾಡಲಾಗುವುದು. ಈ ಉದ್ದೇಶಕ್ಕೆ ಬೆಂಗಳೂರು ನಗರದಲ್ಲಿ ಐದು ಕಡೆಗಳಲ್ಲಿ ಜಾಗ ಒದಗಿಸಲು ಬಿಡಿಎ ಒಪ್ಪಿದೆ” ಎಂದು ಸಚಿವರು ಮಾಧ್ಯಮದ ಮುಂದೆ ಹೇಳಿದ್ಧಾರೆ.
”ಕರಾವಳಿ ಭಾಗದಲ್ಲಿ ಕಡಲ ಕೊರೆತದಿಂದ ಅಪಾರ ನಷ್ಟವಾಗುತ್ತಿದ್ದು, ತಾತ್ಕಾಲಿಕ ತಡೆಗೋಡೆಗಳಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಹಾಗಾಗಿ ಉಲ್ಲಾಳದ ಬಟ್ಟಂಪಾಡಿ ಮತ್ತು ಮರವಂತೆಗಳಲ್ಲಿ ‘ಸೀ ವೇವ್ ಬ್ರೇಕರ್’ ಎಂಬ ವಿಶೇಷ ತಂತ್ರಜ್ಞಾನದ ತಡೆಗೋಡೆ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಈ ಉದ್ದೇಶಕ್ಕಾಗಿ 25 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುವುದು,” ಎಂದು ಹೇಳಿದರು.
‘ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಸಮುದ್ರ ಕೊರೆತ ತಡೆಗಟ್ಟಲು 350 ಕೋಟಿ ರೂ. ವೆಚ್ಚದಲ್ಲಿನಡೆದ ಕಾಮಗಾರಿ ಕಳಪೆಯಾಗಿದೆ. ಈ ಸಂಬಂಧ ತನಿಖೆ ನಡೆಸಲು ತೀರ್ಮಾನಿಸಲಾಗಿದ್ದು, ಸೆಪ್ಟೆಂಬರ್ ತಿಂಗಳೊಳಗೆ ಈ ಸಂಬಂಧ ತನಿಖೆ ಪೂರ್ಣಗೊಳಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು,” ಎಂದು ಹೇಳಿದ್ಧಾರೆ.