ಆಟೋದಲ್ಲಿ ಓಡಾಡುವಾಗ, ಮೀಟರ್ ಗಿಂತ ಜಾಸ್ತಿ ಕೇಳಿಬಿಟ್ರೆ ನಾವು ಆಟೋ ಡ್ರೈವರ್ ಮೇಲೆ ರೇಗಾಡ್ಬಿಡ್ತೇವೆ. ಮೀಟರ್ನಲ್ಲಿ ಎಷ್ಟು ತೋರಿಸ್ತಿದೆಯೋ ಅಷ್ಟೆ ಕೊಡ್ತೇವೆ ಅಂತ ವಾದ ಕೂಡಾ ಮಾಡ್ತೇವೆ. ಆದರೆ ದೆಹಲಿಯಲ್ಲಿ ನಡೆದ ಘಟನೆ ನೋಡ್ತಿದ್ರೆ, ಎಂಥವರೂ ಶಾಕ್ ಆಗೋ ಹಾಗಿದೆ. ಯಾಕಂದ್ರೆ, ದೆಹಲಿ ವಿಮಾನ ನಿಲ್ದಾಣದಿಂದ ನೋಯ್ಡಾಗೆ ಪ್ರಯಾಣ ಮಾಡಲು ಉಬರ್ ತೆಗೆದುಕೊಂಡ ಚಾರ್ಜ್ ಬರೋಬ್ಬರಿ 3 ಸಾವಿರ ರೂಪಾಯಿ.
ನೋಯ್ಡಾ ಮೂಲದ ವ್ಯಕ್ತಿಯೊಬ್ಬರು ದೆಹಲಿ ವಿಮಾನ ನಿಲ್ದಾಣದಿಂದ ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್ಪ್ರೆಸ್ ವೇನಲ್ಲಿ ತಮ್ಮ ಮನೆಗೆ ತೆರಳಬೇಕಾಗಿತ್ತು. ಆದ್ದರಿಂದ ಅವರು ಊಬರ್ ಕ್ಯಾಬ್ ಬುಕ್ ಮಾಡಿದ್ಧಾರೆ. ಆದರೆ ಪಾವತಿಸಬೇಕಾದ ಬಿಲ್ ನೋಡಿ ಗಾಬರಿಗೆ ಒಳಗಾಗಿದ್ದಾರೆ. ಅವರು ಪ್ರಯಾಣಿಸಿದ್ದು ಕೇವಲ 45 ಕಿ.ಮೀ. ಆದರೆ ಬಂದ ಬಿಲ್ ರೂ. 2,935!
ಪೆಟ್ರೋಲ್, ಡಿಸೇಲ್ ಬೆಲೆ ದಿನದಿಂದ ದಿನಕ್ಕೆ ದುಬಾರಿಯಾಗ್ತಿದೆ. ಕ್ಯಾಬ್ ಗಳಷ್ಟೆ ಅಲ್ಲ ಆಟೋಗಳ ಮೀಟರ್ ಚಾರ್ಜ್ ಕೂಡ ದುಬಾರಿಯಾಗಿದೆ. ಅದರಲ್ಲೂ ಊಬರ್ ಬೆಲೆ ಏರಿಸೋದನ್ನ ನೋಡಿದ್ರೆ, ಕ್ಯಾಬಲ್ಲಿ ಪ್ರಯಾಣ ಮಾಡ್ತಿದ್ದೇವೋ ಫ್ಲೈಟ್ ನಲ್ಲೋ ಅಂತ ಅನುಮಾನ ಬರುತ್ತೆ. ಆದರೂ ಅನುಕೂಲಕ್ಕೆ, ಅನಿವಾರ್ಯಕ್ಕೆ, ಅವಸರಕ್ಕೆ ಪ್ರಯಾಣಿಕರು ಹಣ ತೆರುತ್ತ, ಕೊರಗುತ್ತ ಪ್ರಯಾಣ ಬೆಳೆಸುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ತಮ್ಮ ಆಯ್ಕೆಗೆ ತಕ್ಕಂತೆ ಬೆಲೆ ತೆರುವುದು ಅನಿವಾರ್ಯ ಎನ್ನುವುದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ. ನೆಟ್ಟಿಗರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
‘ಆಗಸ್ಟ್ 5ರಂದು ದೆಹಲಿ ವಿಮಾನ ನಿಲ್ದಾಣದಿಂದ ನೋಯ್ಡಾದಲ್ಲಿರುವ ನನ್ನ ಮನೆಗೆ ಸುಮಾರು 45 ಕಿ.ಮೀ ಪ್ರಯಾಣಕ್ಕೆ ರೂ. 2,935 ಬಿಲ್ ಪಾವತಿಸಬೇಕಾಯಿತು. ನಿಗದಿಯಾದ ಬಿಲ್ ರೂ. 147.39 ಮಾತ್ರ ಇತ್ತು. @Uber_India ದಂಥ ಕೆಟ್ಟ ಸೇವೆಗಳಿಗೆ ಸಾರ್ವಜನಿಕರು ಮೊರೆ ಹೋಗುವುದನ್ನು ದ್ವೇಷಿಸುತ್ತೇನೆ. ಆದರೆ ಏನು ಮಾಡುವುದು ನನಗೆ ಬೇರೆ ಆಯ್ಕೆಯೇ ಇಲ್ಲ. ಇನ್ನು ಪಿಕ್-ಅಪ್ ಮತ್ತು ಡ್ರಾಪ್ ಮಾಡುವ ಸ್ಥಳಗಳ ವಿಷಯದಲ್ಲಿಯೂ ಅಷ್ಟೇ ಸಮಸ್ಯೆಯಾಗುತ್ತಿದೆ. ದಯವಿಟ್ಟು ಈ ಅವ್ಯವಸ್ಥೆಯನ್ನು ಸರಿಪಡಿಸಿ, ಹೆಚ್ಚುವರಿ ಮೊತ್ತವನ್ನು ಮರಳಿಸಿ. ದೂರುಗಳ ಮೂಲಕ ಪರಿಹಾರ ಕಾರ್ಯವಿಧಾನವನ್ನು ಕೂಲಂಕಷವಾಗಿ ಪರಿಶೀಲಿಸಿ ನಿರ್ವಹಿಸಿ’ ಎಂದು ಪ್ರಯಾಣಿಕ ದೇವ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ಧಾರೆ. ಇದಕ್ಕೆ ಪ್ರತ್ಯುತ್ತರವಾಗಿ ಊಬರ್ ಇಂಡಿಯಾ, ‘ಈ ಪ್ರಕರಣದ ಕುರಿತು ತನಿಖೆ ಮಾಡಲಾಗುತ್ತಿದೆ’ ಎಂದು ಉತ್ತರಿಸಿದೆ.
ಈ ಪೋಸ್ಟ್ಗೆ ಪ್ರತಿಕ್ರಿಯೆಯಾಗಿ ಮತ್ತೊಬ್ಬ ಪ್ರಯಾಣಿಕರು, ‘ಒಮ್ಮೆ ನೋಯ್ಡಾಕ್ಕೆ ಪ್ರಯಾಣಿಸಲೆಂದು ಬುಕ್ ಮಾಡಿದಾಗ ತೋರಿಸಿದ ಮೊತ್ತ ರೂ. 1,500. ಆದರೆ ಕೊನೆಗೆ ಅವರು ಬಿಲ್ ಪಾವತಿಸಲು ಕೇಳಿದ್ದು ಮೂರರಿಂದ ಮೂರೂವರೆ ಸಾವಿರ ರೂಪಾಯಿ. ನಾನೂ ಕೂಡ ಮರುಪಾವತಿ ಮಾಡಲು ಕೇಳಿಕೊಂಡಿದ್ದೇನೆ.’ ಎಂದಿದ್ದಾರೆ.
ಇದೇ ರೀತಿ ಬೆಲೆ ಏರಿಸುತ್ತಲೇ ಇದ್ದರೆ ಕ್ಯಾಬ್ಗಳನ್ನ ಬಳಸಬೇಕೋ ಬೇಡವೋ ಅನ್ನೋ ಹಾಗಾಗುತ್ತೆ. ಒಟ್ಟಿನಲ್ಲಿ ಬೆಲೆ ಏರಿಕೆ ಬಿಸಿ ಕಾಮನ್ ಮ್ಯಾನ್ನ್ನ ಸುಡ್ತಾ ಇದೆ ಅನ್ನೊದಂತೂ ಸತ್ಯ