ಮನೆ ಬೀಗ ಮುರಿದು ಕಳ್ಳತನ ಮಾಡೋ ಕಳ್ಳರು, ಬ್ಯಾಂಕ್ ಗೆ ಹೋಗಿ ದರೋಡೆ ಮಾಡೋ ಕಳ್ಳರು, ಪಿಕ್ ಪಾಕೆಟ್ ಮಾಡೋ ಕಳ್ಳರು, ಚಿನ್ನದ ಸರ ಕದಿಯೋ ಕಳ್ಳರು, ವಾಹನ ಕದಿಯೋ ಕಳ್ಳರು. ಹೀಗೆ ಒಂದಾ ಎರಡಾ ಪಟ್ಟಿ ಬೆಳೆಯುತ್ತ ಹೋಗುತ್ತೆ.
ಆದರೆ ಈ ಕಳ್ಳರಿದ್ದಾರೆ ನೋಡಿ ಅವರು ಕ್ಯಾಡ್ಬರಿ ಚಾಕಲೇಟ್ನ್ನ ಕದ್ದಿದ್ದಾರೆ. ಅದು ಕೂಡಾ 50ರೂಪಾಯಿಯದ್ದೋ 100 ರೂಪಾಯಿಯದ್ದೋ ಅಲ್ಲ ಬರೋಬ್ಬರಿ 17 ಲಕ್ಷ ರೂಪಾಯಿ ಮೌಲ್ಯದ ಕ್ಯಾಡ್ಬರಿ ಚಾಕಲೇಟ್ ಕದ್ದಿದ್ದಾರೆ.
ಕ್ಯಾಡ್ಬರಿ ವಿತರಕ ರಾಜೇಂದ್ರ ಸಿಂಗ್ ಸಿಧು ಚಾಕೊಲೇಟ್ ಕಳ್ಳತನವಾದ ಬಗ್ಗೆ ಉತ್ತರ ಪ್ರದೇಶದ ಚಿನ್ಹತ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನೆ ಸಂಬಂಧ ಎಫ್ಐಆರ್ ದಾಖಲಾಗಿದೆ.
ಚಿನ್ಹಾಟ್ನಲ್ಲಿದ್ದ ನೆರೆಹೊರೆಯವರು ಕರೆ ಮಾಡಿ ತಮ್ಮ ಮನೆಯ ಬಾಗಿಲು ಮುರಿದು ಬಿದ್ದಿರುವುದನ್ನು ತಿಳಿಸಿದರು ಎಂದು ರಾಜೇಂದ್ರ ಸಿಂಗ್ ಸಿಧು ಹೇಳಿದ್ದಾರೆ. ಚಾಕೋಲೆಟ್ ಸಂಗ್ರಹಿಸಿದ್ದ ಹಳೆ ಮನೆಗೆ ಬಂದು ನೋಡಿದಾಗ, ಅದು ಖಾಲಿ ಬಿದ್ದಿತ್ತು. 175 ಚಾಕೊಲೇಟ್ ಬಾಕ್ಸ್ ಜತೆಗೆ ಅಲ್ಲಿದ್ದ ಭದ್ರತಾ ಕ್ಯಾಮರಾಗಳನ್ನು ಸಹ ಕಳ್ಳರು ಹೊತ್ತುಕೊಂಡು ಹೋಗಿದ್ದಾರೆ.
ನೆರೆಹೊರೆಯವರಲ್ಲಿ ಒಬ್ಬರಿಗೆ ರಾತ್ರಿ ವೇಳೆ ಪಿಕ್ ಅಪ್ ಟ್ರಕ್ ವಾಹನದ ಸದ್ದು ಕೇಳಿದೆ. ಅದರ ಆಧಾರದ ಮೇಲೆ ಕಳ್ಳರು ಕದ್ದ ಚಾಕೊಲೇಟ್ಗಳನ್ನು ಸಾಗಿಸಲು ಟ್ರಕ್ ಅನ್ನು ಬಳಸಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇಷ್ಟು ದಿನ ಚಿನ್ನ, ಬೆಳ್ಳಿ ವಜ್ರ, ಹಣ ಕದಿಯುತ್ತಿದ್ದ ಕಳ್ಳರು ಈಗ ಕ್ಯಾಡ್ಬರಿ ಚಾಕಲೇಟ್ ಕದ್ದು ಎಲ್ಲರೂ ಶಾಕ್ ಆಗುವಂತೆ ಮಾಡಿದ್ದಾರೆ.