alex Certify ಬಿಹಾರದ ಹೊಸ ಮೈತ್ರಿ ಸರ್ಕಾರದಲ್ಲಿ ಕ್ರಿಮಿನಲ್‌ಗಳ ದರ್ಬಾರ್‌; ಶೇ.72ರಷ್ಟು ಸಚಿವರ ಮೇಲಿದೆ ಕ್ರಿಮಿನಲ್‌ ಕೇಸ್‌…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಹಾರದ ಹೊಸ ಮೈತ್ರಿ ಸರ್ಕಾರದಲ್ಲಿ ಕ್ರಿಮಿನಲ್‌ಗಳ ದರ್ಬಾರ್‌; ಶೇ.72ರಷ್ಟು ಸಚಿವರ ಮೇಲಿದೆ ಕ್ರಿಮಿನಲ್‌ ಕೇಸ್‌…..!

ಬಿಹಾರದಲ್ಲಿ ಹೊಸ ಸರ್ಕಾರವೇನೋ ಅಸ್ಥಿತ್ವಕ್ಕೆ ಬಂದಿದೆ. ಆದ್ರೆ ಸಿಎಂ ನಿತೀಶ್‌ ಕುಮಾರ್‌ ಅವರ ಸಂಪುಟಕ್ಕೆ ಸೇರ್ಪಡೆಯಾಗಿರುವ ಶೇ.72ರಷ್ಟು ಸಚಿವರುಗಳ ವಿರುದ್ಧ ಕ್ರಿಮಿನಲ್‌ ಪ್ರಕರಣಗಳಿವೆ. ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿರುವುದಾಗಿ ಮಂತ್ರಿಗಳು ಘೋಷಿಸಿದ್ದಾರೆಂದು ಚುನಾವಣಾ ಹಕ್ಕುಗಳ ಸಂಸ್ಥೆ, ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ಮಾಡಿದೆ.

ಬಿಹಾರದಲ್ಲಿ ಇತ್ತೀಚಿನ ರಾಜಕೀಯ ಸ್ಥಿತ್ಯಂತರದಿಂದಾಗಿ ಎನ್‌ಡಿಎ ಹಾಗೂ ನಿತೀಶ್‌ ಕುಮಾರ್‌ ಅವರ ಜೆಡಿಯು ನಡುವಣ ಮೈತ್ರಿ ಮುರಿದು ಬಿದ್ದಿತ್ತು. ಬಳಿಕ ನಿತೀಶ್‌ ಕುಮಾರ್‌, ಆರ್‌ಜೆಡಿ ಜೊತೆ ದೋಸ್ತಿ ಮಾಡಿಕೊಂಡು ಸರ್ಕಾರ ರಚಿಸಿದ್ದಾರೆ. ನಿತೀಶ್‌ ಕುಮಾರ್‌ ಅವರ ಕ್ಯಾಬಿನೆಟ್ ಸೇರಿರುವ ಬಹುತೇಕರು ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.

ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ದಿನದಂದೇ ಹೊಸ ಕಾನೂನು ಮಂತ್ರಿ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಇದು ಸಹ ವಿವಾದಕ್ಕೆ ಕಾರಣವಾಗಿದೆ. ಬಿಹಾರದ ಕಾನೂನು ಸಚಿವ, ರಾಷ್ಟ್ರೀಯ ಜನತಾ ದಳದ ಕಾರ್ತಿಕೇಯ ಸಿಂಗ್, ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 16 ರಂದು ದಾನಪುರ ನ್ಯಾಯಾಲಯಕ್ಕೆ ಶರಣಾಗಬೇಕಿತ್ತು. ಆದರೆ ಆತ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಆಗಸ್ಟ್ 12 ರಂದು ಆರ್‌ಜೆಡಿ ನಾಯಕ ಕಾರ್ತಿಕೇಯ ಸಿಂಗ್‌ಗೆ ನ್ಯಾಯಾಲಯವು ಸೆಪ್ಟೆಂಬರ್ 1 ರವರೆಗೆ ಮಧ್ಯಂತರ ರಕ್ಷಣೆ ನೀಡಿತ್ತು. ಈ ಬೆಳವಣಿಗೆಗಳು ಬಿಜೆಪಿಗೆ ಅಸ್ತ್ರವಾಗಿವೆ. ನಿತೀಶ್ ಕುಮಾರ್ ಅವರ ನೂತನ ಸಂಪುಟದಲ್ಲಿ ಹಲವು ಕಳಂಕಿತ ನಾಯಕರಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಆದ್ರೆ ಸೆಪ್ಟೆಂಬರ್ 1ರವರೆಗೆ ಯಾವುದೇ ಬಲವಂತದ ಕ್ರಮವಿಲ್ಲ ಎಂದು ನ್ಯಾಯಾಲಯದಿಂದ ಪರಿಹಾರ ಆದೇಶವನ್ನು ಕಾರ್ತಿಕೇಯ ಸಿಂಗ್‌  ಸ್ವೀಕರಿಸಿದ್ದಾರೆ ಎಂದು ಆರ್‌ಜೆಡಿ ಸಮರ್ಥಿಸಿಕೊಂಡಿದೆ. ಬಿಹಾರ ಸಂಪುಟದಲ್ಲಿ ಪ್ರಮಾಣ ವಚನ ಸ್ವೀಕರಿಸಿದ 33 ಸಚಿವರಲ್ಲಿ 27 ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ. ಇದಲ್ಲದೆ, 17 ಸಚಿವರು (ಶೇ.53) ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ.

ಹೊಸ ಸರ್ಕಾರದಲ್ಲಿ ಆರ್‌ಜೆಡಿ 17 ಸಚಿವರನ್ನು ಹೊಂದಿದೆ ಮತ್ತು ಅವರಲ್ಲಿ 15 ಸಚಿವರ (ಶೇ.88) ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ. 11 ಮಂತ್ರಿಗಳು ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಜೆಡಿಯುನಲ್ಲಿ 11 ಸಚಿವರ ಪೈಕಿ 4 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಕಾಂಗ್ರೆಸ್‌ನ ಇಬ್ಬರ ವಿರುದ್ಧವೂ ಅಪರಾಧ ಪ್ರಕರಣಗಳು ದಾಖಲಾಗಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...