ಮುಂಬೈ ಮೂಲದ ಬ್ಯಾಂಕರ್ ಒಬ್ಬರಿಗೆ ಫಾಸ್ಟ್ ಟ್ಯಾಗ್ ಅನ್ನು ಆನ್ಲೈನ್ನಲ್ಲಿ ರೀಚಾರ್ಜ್ ಮಾಡುವ ವೇಳೆ ಮೋಸವಾಗಿದೆ. 34 ವರ್ಷದ ಮಹಿಳೆಯ ಬ್ಯಾಂಕ್ ಖಾತೆಯಿಂದ 4.5 ಲಕ್ಷ ರೂಪಾಯಿ ಹಣವನ್ನು ಸೈಬರ್ ವಂಚಕರು ವಿತ್ಡ್ರಾ ಮಾಡಿದ್ದಾರೆ. ಮುಂಬೈನ ದಹಿಸರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ದುಷ್ಕರ್ಮಿಗಾಗಿ ಶೋಧ ನಡೆಸುತ್ತಿದ್ದಾರೆ.
ನ್ಯಾಶನಲ್ ಹೈವೇ ಅಥಾರಿಟಿ ಆಫ್ ಇಂಡಿಯಾದ ಸ್ವಯಂಚಾಲಿತ ಟೋಲ್ ಕಡಿತಕ್ಕಾಗಿ ಫಾಸ್ಟ್ಟ್ಯಾಗ್ ಸ್ಟಿಕ್ಕರ್ ರೀಚಾರ್ಜ್ ಬಾಕಿಯಿರುವುದಾಗಿ ಮಹಿಳೆಗೆ ಆಕೆಯ ಸಹೋದರ ತಿಳಿಸಿದ್ದರು. ಸಂತ್ರಸ್ತೆ ತನ್ನ ವಾಹನದ ಫಾಸ್ಟ್ಟ್ಯಾಗ್ ಅನ್ನು ಆನ್ಲೈನ್ನಲ್ಲಿ ಹೇಗೆ ರೀಚಾರ್ಜ್ ಮಾಡಬಹುದೆಂದು ಇಂಟರ್ನೆಟ್ನಲ್ಲಿ ಸರ್ಚ್ ಮಾಡಿದ್ದಾಳೆ. ಅಲ್ಲಿದ್ದ ಕಸ್ಟಮರ್ ಕೇರ್ ಸಂಖ್ಯೆಗೆ ಕರೆ ಮಾಡಿದ್ದಾಳೆ.
ಅದು ನಕಲಿ ಕಸ್ಟಮರ್ ಕೇರ್ ನಂಬರ್ ಅನ್ನೋದು ಮಹಿಳೆಗೆ ಗೊತ್ತಿರಲಿಲ್ಲ. ಕರೆ ಸ್ವೀಕರಿಸಿದ ವ್ಯಕ್ತಿ ತಾನು ಫಾಸ್ಟ್ಟ್ಯಾಗ್ ರೀಚಾರ್ಜ್ ಮಾಡಲು ಸಹಾಯ ಮಾಡುವುದಾಗಿ ಹೇಳಿದ್ದಾನೆ. ರೀಚಾರ್ಜ್ ಮಾಡಲು ಪ್ರತ್ಯೇಕ ಲಿಂಕ್ ಕಳುಹಿಸಿದ್ದಾನೆ. ಲಿಂಕ್ ಅನ್ನು ಕ್ಲಿಕ್ ಮಾಡಿದ ಬಳಿಕ ಕೆಲವೊಂದು ಅಪ್ಲಿಕೇಶನ್ಗಳು ತಂತಾನೇ ಡೌನ್ಲೋಡ್ ಆಗಿವೆ. ವಂಚಕ ಬ್ಯಾಂಕ್ನ ಮೊಬೈಲ್ ಅಪ್ಲಿಕೇಶನ್ ತೆರೆಯಲು ಮತ್ತು ಮೊಬೈಲ್ ಬ್ಯಾಂಕಿಂಗ್ಗೆ ಲಾಗಿನ್ ಆಗಲು ಸೂಚಿಸಿದ್ದಾನೆ. ಹಾಗೆ ಮಾಡಿದಾಗ ಫಾಸ್ಟ್ಟ್ಯಾಗ್ ರೀಚಾರ್ಜ್ ಯಶಸ್ವಿಯಾಗಿದೆ ಎಂಬ ಸಂದೇಶವೊಂದು ಅವಳಿಗೆ ಬಂತು.
ಆದರೆ ಆಕೆಯ ಬ್ಯಾಂಕ್ ಖಾತೆಯಲ್ಲಿ ಅನೇಕ ವಹಿವಾಟುಗಳನ್ನು ಮಾಡಲಾಗಿತ್ತು. ಸುಮಾರು 6.99 ಲಕ್ಷ ರೂಪಾಯಿ ಅವಳ ಖಾತೆಯಲ್ಲಿತ್ತು. ಕೂಡಲೇ ತಾನು ಮೋಸ ಹೋಗಿರುವುದನ್ನು ಅರಿತ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ವಿಷಯ ತಿಳಿಸಿದ್ದಾಳೆ. ಪೊಲೀಸರು ಸಂಬಂಧಪಟ್ಟ ಬ್ಯಾಂಕ್ನ ಸಹಾಯದಿಂದ 2.45 ಲಕ್ಷ ರೂಪಾಯಿಗಳ ವ್ಯವಹಾರವನ್ನು ನಿಲ್ಲಿಸಲು ಸಾಧ್ಯವಾಯಿತು. ಆದರೂ ಆಕೆ 4.54 ಲಕ್ಷ ರೂಪಾಯಿಯನ್ನು ಕಳೆದುಕೊಳ್ಳಬೇಕಾಯ್ತು. ಫಾಸ್ಟ್ಟ್ಯಾಗ್ ರೀಚಾರ್ಜ್ ಮಾಡುವುದು ಹೇಗೆ ಅನ್ನೋದನ್ನು ಇಂಟರ್ನೆಟ್ನಲ್ಲಿ ಹುಡುಕುವ ಬದಲು ವಿಶ್ವಾಸಾರ್ಹ ಅಪ್ಲಿಕೇಶನ್ಗಳು ಮತ್ತು ವೆಬ್ಸೈಟ್ಗಳನ್ನು ಮಾತ್ರ ಬಳಸಿದರೆ ಇಂತಹ ವಂಚನೆಯನ್ನು ತಡೆಯಲು ಸಾಧ್ಯ.