75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು, ಮೂರು ದಿನಗಳ ಕಾಲ ‘ಹರ್ ಘರ್ ತಿರಂಗಾ’ ಅಭಿಯಾನದಲ್ಲಿ ಭಾಗಿಯಾಗುವಂತೆ ದೇಶವಾಸಿಗಳಿಗೆ ಕರೆ ನೀಡಿದ್ದರು. ಇದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಧ್ವಜ ತಯಾರಕರು ಹಾಗೂ ಮಾರಾಟಗಾರರಿಗೂ ಭರ್ಜರಿ ವಹಿವಾಟು ನಡೆದಿದೆ.
ಜುಲೈ 22ರಂದು ನರೇಂದ್ರ ಮೋದಿಯವರು ಈ ಕರೆ ನೀಡಿದ್ದು, ಆಗಸ್ಟ್ 13 ರಿಂದ ಆಗಸ್ಟ್ 15 ರವರೆಗೆ ತಮ್ಮ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವಂತೆ ಸೂಚಿಸಲಾಗಿತ್ತು. ಈ 20 ದಿನಗಳ ಅವಧಿಯಲ್ಲಿ ಒಟ್ಟು 30 ಕೋಟಿ ದ್ವಜಗಳು ಮಾರಾಟವಾಗಿದ್ದು, ಬರೋಬ್ಬರಿ 500 ಕೋಟಿ ರೂಪಾಯಿಗಳಷ್ಟು ವಹಿವಾಟು ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಈ ಮೊದಲು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ 150 ರಿಂದ 200 ಕೋಟಿ ರೂಪಾಯಿಗಳ ಮೌಲ್ಯದ ತ್ರಿವರ್ಣ ಧ್ವಜದ ವಹಿವಾಟು ನಡೆಯುತ್ತಿದ್ದು, ಆದರೆ ಈ ಬಾರಿ ‘ಹರ್ ಘರ್ ತಿರಂಗಾ’ ಅಭಿಯಾನದ ಕಾರಣಕ್ಕೆ 500 ಕೋಟಿ ರೂಪಾಯಿಗಳ ವಹಿವಾಟು ನಡೆದಿದೆ ಎಂದು ಹೇಳಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದಲೂ ಸಹ 60 ಕೋಟಿ ರೂಪಾಯಿ ಮೌಲ್ಯದ 2.36 ಕೋಟಿ ಧ್ವಜಗಳನ್ನು ಖರೀದಿ ಮಾಡಲಾಗಿದೆ ಎಂದು ತಿಳಿದುಬಂದಿದೆ.