2002ರಲ್ಲಿ ಗುಜರಾತ್ ನಲ್ಲಿ ನಡೆದಿದ್ದ ಗೋಧ್ರೋತ್ತರ ಹಿಂಸಾಚಾರದ ವೇಳೆ 21 ವರ್ಷದ ಗರ್ಭಿಣಿ ಬಿಲ್ಕೀಸ್ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದ ಅಪರಾಧಿಗಳನ್ನು ಗುಜರಾತ್ ಸರ್ಕಾರ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ಬಿಲ್ಕೀಸ್ ಬಾನು ಅತ್ಯಾಚಾರ ಪ್ರಕರಣದಲ್ಲಿ ದೋಷಿಗಳಾಗಿದ್ದ 11 ಆರೋಪಿಗಳನ್ನು ಗುಜರಾತ್ ಸರ್ಕಾರ ಬಿಡುಗಡೆ ಮಾಡಿದ್ದು, ಆದರೆ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಬಾರದೆಂಬ ಕೇಂದ್ರದ ನಿಯಮವನ್ನು ಉಲ್ಲಂಘಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಆದರೆ ಇದನ್ನು ನಿರಾಕರಿಸಿರುವ ಅಧಿಕಾರಿಗಳು, ಸರ್ಕಾರ ತಾವು ರೂಪಿಸಿಕೊಂಡಿರುವ ನಿಯಮಾವಳಿಗಳ ಅಡಿಯಲ್ಲಿ ಕೈದಿಗಳ ಬಿಡುಗಡೆಗೆ ತೀರ್ಮಾನ ಕೈಗೊಳ್ಳಬಹುದು ಎಂಬ ಸುಪ್ರೀಂ ಕೋರ್ಟ್ ಸೂಚನೆಯನ್ನು ಅನುಸರಿಸಿ ಈ 11 ಮಂದಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಲಾಗಿದೆ. ಜೈಲಿನಿಂದ ಬಿಡುಗಡೆಯಾಗಿರುವ ಕೈದಿಗಳ ಪೈಕಿ ಒಬ್ಬನಾದ ರಾಧೇ ಶಾಂ ಎಂಬಾತ ಮಾತನಾಡಿ, ಇನ್ನು ಮುಂದೆ ಹೊಸ ಬದುಕು ಕಟ್ಟಿಕೊಳ್ಳುವುದಾಗಿ ಹೇಳಿದ್ದಾನೆ.