ನವದೆಹಲಿ: ಸರ್ಕಾರಿ ಸಹಾಯಧನಕ್ಕೆ ಇನ್ನು ಮುಂದೆ ಆಧಾರ್ ಕಡ್ಡಾಯಗೊಳಿಸಲಾಗಿದೆ. ಆಧಾರ್ ಪ್ರಾಧಿಕಾರದಿಂದ ಹೊಸ ಆದೇಶ ಹೊರಡಿಸಿದ್ದು, ಸಹಾಯಧನ ಪಡೆಯಲು ಆಧಾರ್ ಕೊಡಬೇಕಿದೆ. ಆಧಾರ್ ಕಾರ್ಡ್ ಬದಲು ಬೇರೆ ದೃಢೀಕೃತ ಗುರುತಿನ ಚೀಟಿ ನೀಡಲು ಇನ್ನು ಅವಕಾಶವಿಲ್ಲವೆಂದು ಹೇಳಲಾಗಿದೆ.
ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಈ ಕುರಿತಾಗಿ ಹೊಸ ಸುತ್ತೋಲೆ ಹೊರಡಿಸಿದೆ. ಕೇಂದ್ರದ ಎಲ್ಲಾ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳಿಗೆ ಹೊರಡಿಸಿದ ಸುತ್ತೋಲೆ ಪ್ರಕಾರ ಸರ್ಕಾರದ ಸಹಾಯಧನ ಪಡೆಯಲು ಆಧಾರ್ ಸಂಖ್ಯೆಯನ್ನು ಕಡ್ಡಾಯ ಮಾಡಲಾಗಿದೆ.
ಆಧಾರ್ ಕಾಯ್ದೆ ಸೆಕ್ಷನ್ 7 ರ ಅನ್ವಯ ಸರ್ಕಾರಿ ಸೌಲಭ್ಯ ಪಡೆಯಲು ಆಧಾರ್ ನೀಡುವುದು ಕಡ್ಡಾಯವಾಗಿತ್ತು. ಆಧಾರ್ ನೀಡದವರಿಗೆ ಬೇರೆ ರೀತಿಯ ಪರ್ಯಾಯ ಗುರುತು ಖಚಿತಪಡಿಸುವ ಐಡಿ ಕಾರ್ಡ್ ಗಳನ್ನು ಪಡೆದು ಸೌಲಭ್ಯ ನೀಡಲು ತಿಳಿಸಲಾಗಿತ್ತು. ಸರ್ಕಾರಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಆಧಾರ್ ನೀಡಿಲ್ಲದಿದ್ದರೆ ಅಂತಹ ವ್ಯಕ್ತಿ ಆಧಾರ್ ನಂಬರ್ ಗೆ ಅರ್ಜಿ ಸಲ್ಲಿಸಬೇಕು. ನಂತರ ಯಾವುದೇ ಪರ್ಯಾಯ ಅಥವಾ ಗುರುತು ಖಚಿತಪಡಿಸುವ ವಿಧಾನದ ಮೂಲಕ ಸೌಲಭ್ಯ ಪಡೆಯಬಹುದು. ಆದರೆ ಸಂಖ್ಯೆ ಕಾರ್ಡ್ ಇಲ್ಲದಿರುವವರು ಸಹಾಯಧನ ಪಡೆದುಕೊಳ್ಳಲು ಇನ್ನು ಮುಂದೆ ಸಾಧ್ಯವಾಗಲ್ಲ. ಕನಿಷ್ಠ ಆಧಾರ್ ಸಂಖ್ಯೆ ಪಡೆಯಲು ಅರ್ಜಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಸೌಲಭ್ಯ ಪಡೆಯಲು ಆಧಾರ್ ಕಡ್ಡಾಯಗೊಳಿಸಲಾಗಿದೆ ಎಂದು ಹೇಳಲಾಗಿದೆ.