20 ರೂಪಾಯಿ, ಜಸ್ಟ್ 20 ರೂಪಾಯಿ. ಇದು ಕೆಲವರಿಗೆ 20 ರೂಪಾಯಿ ಅಷ್ಟೇ ಆಗಿರುತ್ತೆ. ಇನ್ನು ಕೆಲವರಿಗೆ ಇದೇ 20 ರೂಪಾಯಿ ದೊಡ್ಡ ಮೊತ್ತವಾಗಿರುತ್ತೆ. ಹಾಗಂತ 20 ರೂಪಾಯಿಗೊಸ್ಕರ ಯಾರೂ ಕಾನೂನು ಹೋರಾಟ ಮಾಡೋಲ್ಲ. ಆದರೆ ಇಲ್ಲೊಬ್ಬ ವಕೀಲ ಸಾಹೇಬರು ಇದ್ದಾರೆ ನೋಡಿ, ಇವರು 20 ರೂಪಾಯಿಗೋಸ್ಕರ ಬರೋಬ್ಬರಿ 22 ವರ್ಷ ಕಾನೂನು ಹೋರಾಟ ನಡೆಸಿದ್ದಾರೆ. ಅಷ್ಟೆ ಅಲ್ಲ ಗೆಲುವು ಕೂಡಾ ಸಾಧಿಸಿದ್ಧಾರೆ.
ಇದು ಸುಮಾರು 22 ವರ್ಷದ ಹಿಂದಿನ ಕಥೆ. 1999ರ ಡಿಸೆಂಬರ್ 25ರಲ್ಲಿ ಮಥುರಾದ ವಕೀಲ ತುಂಗನಾಥ್ ಚತುರ್ವೆದಿ ಮಥುರಾ ಕಂಟೋನ್ಮೆಂಟ್ನಿಂದ ಮೊರಾದಾಬಾದ್ಗೆ ತೆರಳುವಾಗ ಎರಡು ಟಿಕೆಟ್ ಖರೀದಿಸಿದ್ದರು. ಆ ವೇಳೆ ಟಿಕೆಟ್ ಬೆಲೆ 35 ರೂಪಾಯಿಯಾಗಿತ್ತು. ಆದರೆ, ಟಿಕೆಟ್ ನೀಡಿದ್ದ ಕ್ಲರ್ಕ್ 70 ರೂಪಾಯಿ ಬದಲಿಗೆ 90 ರೂಪಾಯಿ ತೆಗೆದುಕೊಂಡಿದ್ದ. 20 ರೂಪಾಯಿ ಹೆಚ್ಚುವರಿ ತೆಗೆದುಕೊಂಡಿದ್ದೀರಿ ಎಂದು ಕೇಳಿದ್ರೂ ಸಹ ಹಣ ವಾಪಸ್ ನೀಡಿರಲಿಲ್ಲ. ಈ ವೇಳೆ ರೈಲು ಆಗಮಿಸಿದ್ದ ಕಾರಣ ತುಂಗನಾಥ್ ತಮ್ಮ ಸ್ನೇಹಿತನೊಂದಿಗೆ ಪ್ರಯಾಣ ಬೆಳೆಸಿದ್ದರು.
ಪ್ರಯಾಣ ಬೆಳೆಸಿ ವಾಪಸ್ ಆದ ಬಳಿಕ ತುಂಗನಾಥ್ ಅವರು, ಈಶಾನ್ಯ ರೈಲ್ವೆ ಗೋರಖ್ಪುರದ ಜನರಲ್ ಮ್ಯಾನೇಜರ್, ಮಥುರಾ ಕಂಟೋನ್ಮೆಂಟ್ ರೈಲು ನಿಲ್ದಾಣ, ಟಿಕೆಟ್ ಬುಕ್ಕಿಂಗ್ ಕ್ಲರ್ಕ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಹೀಗಾಗಿ, ಗ್ರಾಹಕ ವೇದಿಕೆ ಸಮನ್ಸ್ ಸಹ ಜಾರಿ ಮಾಡಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ಬಾರಿ ವಿಚಾರಣೆ ನಡೆಸಿದ್ದು, ಆಗಸ್ಟ್ 5ರಂದು ಅಂತಿಮ ತೀರ್ಪು ಪ್ರಕಟಗೊಂಡಿದೆ. ಬರೋಬ್ಬರಿ 22 ವರ್ಷಗಳ ಬಳಿಕ ಗ್ರಾಹಕ ವೇದಿಕೆಯಲ್ಲಿ ವಕೀಲ ತುಂಗನಾಥ್ ಚತುರ್ವೇದಿ ಪ್ರಕರಣ ಗೆದ್ದಿದ್ದಾರೆ.
ಇದೀಗ 20 ರೂಪಾಯಿಗೆ ವಾರ್ಷಿಕ ಶೇ.12ರ ಬಡ್ಡಿಯೊಂದಿಗೆ ಹಣ ಪಾವತಿ ಮಾಡುವಂತೆ ಗ್ರಾಹಕರ ವೇದಿಕೆ ಆದೇಶಿಸಿದೆ. ಜೊತೆಗೆ ಆಗಸ್ಟ್ 30ರೊಳಗೆ ಮೊತ್ತ ಪಾವತಿ ಮಾಡುವಂತೆ ಸೂಚನೆ ನೀಡಿದೆ. ಒಂದು ವೇಳೆ ಇದರಲ್ಲಿ ವಿಫಲವಾದರೆ ವಾರ್ಷಿಕವಾಗಿ ಶೇ. 15ರ ಬಡ್ಡಿದರದಲ್ಲಿ ಹಣ ನೀಡುವಂತೆ ಸೂಚನೆ ನೀಡಿದೆ.
ಪ್ರಕರಣವನ್ನು ಕೈಬಿಡುವಂತೆ ಕುಟುಂಬದ ಸದಸ್ಯರು ಹಾಗೂ ನೆರೆಹೊರೆಯವರು ಅನೇಕ ಸಲ ತುಂಗನಾಥ್ ಮೇಲೆ ಒತ್ತಡ ಹೇರಿದ್ದರು. ರೈಲ್ವೆ ಇಲಾಖೆ ಸಹ ರಾಜಿ ಮಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿತ್ತು. ಆದರೆ, ಇದಕ್ಕೆ ತಲೆಕೆಡಿಸಿಕೊಳ್ಳದೇ ಅವರು ಕಾನೂನು ಹೋರಾಟ ನಡೆಸಿ, ಅದರಲ್ಲಿ ಗೆದ್ದಿದ್ದಾರೆ. ಇದೀಗ ಮಾತನಾಡಿರುವ ಅವರು, ನಾನು ಹಣದ ವಿಷಯಕ್ಕಾಗಿ ಹೋರಾಟ ನಡೆಸಿಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಡಿದ್ದೇನೆ ಎಂದು ಹೇಳಿದ್ದಾರೆ.