ಅಮೆರಿಕದ ಪ್ರಮುಖ ಅತಿ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ಸ್ಪಿರಿಟ್ ಏರ್ಲೈನ್ಸ್ನ ಏಜೆಂಟ್ ಹಾಗೂ ಮಹಿಳಾ ಸಿಬ್ಬಂದಿ ನಡುವೆ ನಡೆದ ಬಡಿದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಡಲ್ಲಾಸ್-ಫೋರ್ಟ್ ವರ್ತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೊಂದಿಗೆ ಸ್ಪಿರಿಟ್ ಏರ್ಲೈನ್ಸ್ ಪ್ರತಿನಿಧಿಯು ತೀವ್ರ ವಾಗ್ವಾದ ನಡೆಸುತ್ತಿರುವುದನ್ನು 90 ಸೆಕೆಂಡುಗಳ ವಿಡಿಯೊದಲ್ಲಿ ನೋಡಬಹುದು.
ಆರಂಭದಲ್ಲಿ ಗೂಳಿಯಂತೆ ಒಬ್ಬರನ್ನೊಬ್ಬರು ತಳ್ಳಿಕೊಳ್ಳುತ್ತಾರೆ, ಪೈಪೋಟಿಗೆ ಬಿದ್ದಂತೆ ವಾಗ್ವಾದ ಮಾಡಿಕೊಳ್ಳುತ್ತಾರೆ. ಕಿರುಚಿಕೊಳ್ಳುತ್ತಾರೆ. ಒಂದು ಹಂತದಲ್ಲಿ ಮಹಿಳೆಯು ಏರ್ಲೈನ್ಸ್ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿದ್ದಾಳೆ. ಇದರಿಂದ ಆತ ಕೂಡ ಕೆರಳಿದ್ದು, ತಿರುಗಿ ಬಾರಿಸಿದ್ದಲ್ಲದೆ ಆಕೆಯನ್ನು ತಳ್ಳಿ, ತಾನೂ ನೆಲಕ್ಕುರುಳಿದ್ದಾನೆ.
ಅವಳು ಹಿಂದೆ ಸರಿಯುತ್ತಿದ್ದಂತೆ ಆತನೂ ಅವಳನ್ನು ತಳ್ಳಿಕೊಂಡಂತೆ ಹಿಂಬಾಲಿಸುವಾಗ ಅವನ ಮೇಲೆ ಜನಾಂಗೀಯ ಮತ್ತು ಹೋಮೋಫೋಬಿಕ್ ನಿಂದನೆಗಳನ್ನು ಮಾಡುತ್ತಾಳೆ. ಒಬ್ಬ ವ್ಯಕ್ತಿ ಇಬ್ಬರನ್ನು ಬೇರ್ಪಡಿಸಲು ಪ್ರಯತ್ನಿಸುತ್ತಾನೆ, ಮಹಿಳೆ ಏಜೆಂಟ್ ಅನ್ನು ತಳ್ಳುತ್ತಾಳೆ ಮತ್ತು ಅವನನ್ನು ಜರಿಯುತ್ತಾಳೆ.
ತಳ್ಳಾಟದ ಬಳಿಕ ಆ ಮಹಿಳೆ ಓಡಿಹೋಗಲು ಪ್ರಯತ್ನಿಸುತ್ತಿರುವಾಗ ಆತನೂ ಅವಳನ್ನು ಹಿಂಬಾಲಿಸುತ್ತಾನೆ, ನಂತರ ಅವಳ ತಲೆಗೆ ಗುದ್ದುತ್ತಾನೆ. ಇದನ್ನು ನೋಡಿದ ಇತರರು ಬೇರ್ಪಡಿಸಲು ಧಾವಿಸುತ್ತಾರೆ. ಮಹಿಳೆಯ ವಿರುದ್ಧ ಹೋರಾಡುವ ಏಜೆಂಟ್ಗೆ ಇನ್ನೊಬ್ಬ ವ್ಯಕ್ತಿ ಸವಾಲು ಹಾಕುವುದರೊಂದಿಗೆ ವಿಡಿಯೊ ಕೊನೆಗೊಳ್ಳುತ್ತದೆ.
ಈ ಪ್ರಕರಣ ಮುಂದೇನಾಯಿತೆಂದು ಗೊತ್ತಾಗಿಲ್ಲ. ಆದರೆ, ಮುಂದುವರಿದ ದೇಶವೊಂದರ ವಿಮಾನ ನಿಲ್ದಾಣದಲ್ಲಿ ಅನಾಗರಿಕ ವರ್ತನೆಯಂತೂ ಜಗಜ್ಜಾಹಿರಾಗಿದೆ