ನವದೆಹಲಿ: ಭಾರತದ ಬಳಿ ಪ್ರಜಾಪ್ರಭುತ್ವ ಎಂಬ ದೊಡ್ಡ ಶಕ್ತಿ ಇದೆ. ಕೆಂಪುಕೋಟೆಯಿಂದ ಪ್ರತಿ ಮನೆಗೂ ಸ್ವಾತಂತ್ರ್ಯದ ಸಂಭ್ರಮ ತೆಗೆದುಕೊಂಡು ಹೋಗಿದ್ದೇವೆ. ಭಾರತದ ಬಳಿ ಒಂದು ಆಂತರಿಕ ಶಕ್ತಿ ಇದೆ ಅನ್ನುವುದು ತಿಳಿದಿರಲಿಲ್ಲ. ಹರ್ ಘರ್ ತಿರಂಗಾ ಮೂಲಕ ಪ್ರತಿ ಮನೆಗೂ ಸ್ವಾತಂತ್ರದ ಸಂಭ್ರಮ ಕೊಂಡೊಯ್ದಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ದೆಹಲಿಯ ಕೆಂಪು ಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ, ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಭಾರತೀಯರು ತ್ಯಾಗ ಬಲಿದಾನ ಮಾಡಿದ್ದಾರೆ. ಅಂತಹ ಮಹನೀಯರನ್ನು ಸ್ಮರಿಸುವ ಮೂಲಕ ಅವರ ಆಶಯಗಳೊಂದಿಗೆ ಹೊಸ ಹೆಜ್ಜೆ ಇಡೋಣ ಎಂದು ಹೇಳಿದ್ದಾರೆ.
ಭಾರತದ ನಾರಿ ಶಕ್ತಿ ಸ್ವಾತಂತ್ರ್ಯ ಹೋರಾಟದಲ್ಲಿ ತಾವು ಏನು ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಭಾರತದ ನಾರಿ ಶಕ್ತಿ ಸ್ವಾತಂತ್ರ್ಯಕ್ಕಾಗಿ ಸಮಾನವಾಗಿ ಹೋರಾಟ ನಡೆಸಿದೆ. ಎಲ್ಲಾ ಹೋರಾಟಗಾರರಿಗೆ ಗೌರವ ಸಲ್ಲಿಸಬೇಕು. ಬ್ರಿಟೀಷರ ವಿರುದ್ಧ ಹೋರಾಡಿದ ಕ್ರಾಂತಿಕಾರಿಗಳಿಗೆ ದೇಶ ಚಿರಋಣಿಯಾಗಿದೆ. ರಾಷ್ಟ್ರಪಿತ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ನೆಹರು, ತಾತ್ಯಾ ಟೋಪಿ, ಭಗತ್ ಸಿಂಗ್, ಚಂದ್ರಶೇಖರ ಆಜಾದ್, ಮಂಗಲ್ ಪಾಂಡೆ, ರಾಜಗುರು, ರಾಣಿ ಲಕ್ಷ್ಮೀಬಾಯಿ, ಝಲ್ಕರಿಬಾಯಿ, ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ ಮಹನೀಯರನ್ನು ನಾವೆಲ್ಲರೂ ಸ್ಮರಿಸಬೇಕು. ಹೊಸ ಸಾಮರ್ಥ್ಯದಿಂದ ಹೊಸ ಹೆಜ್ಜೆ ಇಡುವ ದಿನ ಇದಾಗಿದೆ ಎಂದರು.