ಇಸ್ಲಾಮಾಬಾದ್: ರಷ್ಯಾದ ತೈಲ ಖರೀದಿಗಾಗಿ ಭಾರತವನ್ನು ಟೀಕಿಸುತ್ತಿರುವ ಪಾಶ್ಚಿಮಾತ್ಯ ದೇಶಗಳ ವಿರುದ್ಧ ವಾಗ್ದಾಳಿ ನಡೆಸಿದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು, ಸ್ವತಂತ್ರ ವಿದೇಶಾಂಗ ನೀತಿಗಾಗಿ ಮತ್ತೊಮ್ಮೆ ಭಾರತವನ್ನು ಶ್ಲಾಘಿಸಿದ್ದಾರೆ.
ಲಾಹೋರ್ನಲ್ಲಿ ನಡೆದ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, ಸ್ಲೋವಾಕಿಯಾದಲ್ಲಿ ನಡೆದ ಬ್ರಾಟಿಸ್ಲಾವಾ ಫೋರಂನಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಭಾಷಣದ ವಿಡಿಯೋ ಕ್ಲಿಪ್ ಪ್ಲೇ ಮಾಡಿ ರಷ್ಯಾದಿಂದ ಅಗ್ಗದ ದರದಲ್ಲಿ ತೈಲವನ್ನು ಖರೀದಿಸದಂತೆ ಅಮೆರಿಕದ ಒತ್ತಡಕ್ಕೆ ಎದುರಾಗಿ ದೃಢವಾಗಿ ನಿಂತಿದ್ದಕ್ಕಾಗಿ ಜೈಶಂಕರ್ ಅವರನ್ನು ಶ್ಲಾಘಿಸಿದರು.
ಪಾಕಿಸ್ತಾನದಂತೆಯೇ ಅದೇ ಸಮಯದಲ್ಲಿ ಸ್ವಾತಂತ್ರ್ಯ ಪಡೆದ ಭಾರತ ದೃಢವಾದ ನಿಲುವನ್ನು ತೆಗೆದುಕೊಂಡು ತನ್ನ ಜನರ ಅಗತ್ಯಕ್ಕೆ ಅನುಗುಣವಾಗಿ ತಮ್ಮ ವಿದೇಶಾಂಗ ನೀತಿಯನ್ನು ಮಾಡಲು ಸಾಧ್ಯವಾದರೆ, ಇವರಿಗೆ(ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರ) ಏಕೆ ಆಗುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
ರಷ್ಯಾದಿಂದ ತೈಲವನ್ನು ಖರೀದಿಸದಂತೆ ಅಮೆರಿಕ ಭಾರತಕ್ಕೆ ಆದೇಶಿಸಿತ್ತು. ಭಾರತವು ಅಮೆರಿಕದ ಕಾರ್ಯತಂತ್ರದ ಮಿತ್ರ, ಪಾಕಿಸ್ತಾನ ಅಲ್ಲ. ರಷ್ಯಾದ ತೈಲವನ್ನು ಖರೀದಿಸಬೇಡಿ ಎಂದು ಅಮೆರಿಕ ಹೇಳಿದಾಗ ಭಾರತದ ವಿದೇಶಾಂಗ ಸಚಿವರು ನಿರಾಕರಿಸಿದ್ದರು.
ರಷ್ಯಾದ ತೈಲವನ್ನು ಖರೀದಿಸುವ ಅಮೆರಿಕದ ಒತ್ತಡಕ್ಕೆ ಮಣಿದ ಶೆಹಬಾಜ್ ಷರೀಫ್ ಸರ್ಕಾರವನ್ನು ಇಮ್ರಾನ್ ಖಾನ್ ಕಟುವಾಗಿ ಟೀಕಿಸಿದರು. ನಾವು ಅಗ್ಗದ ತೈಲವನ್ನು ಖರೀದಿಸುವ ಬಗ್ಗೆ ರಷ್ಯಾದೊಂದಿಗೆ ಮಾತನಾಡಿದ್ದೇವೆ. ಆದರೆ, ಈ ಸರ್ಕಾರಕ್ಕೆ ಒತ್ತಡ ಹಾಕಬೇಡಿ ಎಂದು ಅಮೆರಿಕಕ್ಕೆ ಹೇಳಲು ಧೈರ್ಯವಿಲ್ಲ. ಇಂಧನ ಬೆಲೆಗಳು ಗಗನಕ್ಕೇರುತ್ತಿದ್ದು, ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ನಾನು ಈ ಗುಲಾಮಗಿರಿಯ ವಿರುದ್ಧವಾಗಿದ್ದೇನೆ ಎಂದು ಹೇಳಿದ್ದಾರೆ.
ರಷ್ಯಾದಿಂದ ಭಾರತದ ತೈಲ ಆಮದು ಮಾಡಿಕೊಳ್ಳುವುದರಿಂದ ಉಕ್ರೇನ್ ಯುದ್ಧಕ್ಕೆ ಧನಸಹಾಯ ನೀಡಿದಂತಾಗುತ್ತದೆಯಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಜೈಶಂಕರ್, ನಾನು ವಾದ ಮಾಡಲು ಬಯಸುವುದಿಲ್ಲ. ರಷ್ಯಾ ತೈಲವನ್ನು ಆಮದು ಮಾಡಿಕೊಂಡು ಭಾರತ ಯುದ್ಧಕ್ಕೆ ಧನಸಹಾಯ ನೀಡಿದರೆ,. ರಷ್ಯಾದ ಅನಿಲ ಆಮದು ಮಾಡಿಕೊಳ್ಳುವ ಯುರೋಪ್ ದೇಶಗಳು ಯುದ್ಧಕ್ಕೆ ಧನಸಹಾಯ ನೀಡುತ್ತಿಲ್ಲವೇ? ಎಂದು ಪ್ರಶ್ನಿಸಿದ್ದರು. ಕೇವಲ ಭಾರತೀಯ ಹಣ ಮತ್ತು ಭಾರತಕ್ಕೆ ಬರುತ್ತಿರುವ ರಷ್ಯಾದ ತೈಲವು ಯುದ್ಧಕ್ಕೆ ಧನಸಹಾಯ ನೀಡುತ್ತದೆಯೇ? ಯುರೋಪ್ ಗೆ ಬರುವ ರಷ್ಯಾದ ಅನಿಲ ನಿಧಿಯನ್ನು ನೀಡುತ್ತಿಲ್ಲವೇ? ಎಂದು ಕೇಳಿದ್ದರು. ಈ ವಿಡಿಯೋ ಪ್ಲೇ ಮಾಡಿದ ಇಮ್ರಾನ್ ಖಾನ್ ಪಾಕ್ ಪ್ರಧಾನಿ ನಡೆದ ಟೀಕಿಸಿದ್ದಾರೆ.