ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಅನ್ನಭಾಗ್ಯ ಯೋಜನೆಯಡಿ ಪಡಿತರ ವಿತರಿಸಲಾಗುತ್ತದೆ. ಆದರೆ ಕೆಲವರು ಇದನ್ನು ದುರುಪಯೋಗಪಡಿಸಿಕೊಂಡು ತಮಗೆ ದೊರೆತ ಪಡಿತರವನ್ನು ಕಾಳ ಸಂತೆಯಲ್ಲಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಾರೆ.
ಇಂಥವುದೇ ಒಂದು ಪ್ರಕರಣದಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೊಸಂತೆ ಗ್ರಾಮದ ಸಾಮಾಜಿಕ ಕಾರ್ಯಕರ್ತ ಸ್ವಾಮಿನಾಥ್ ಎಂಬವರ ಪತ್ನಿ, ಬಡ ಜನರಿಗಾಗಿ ವಿತರಿಸಲೆಂದು ನೀಡಲಾಗಿದ್ದ ಒಂದು ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಪತಿಗೆ ಗೊತ್ತಿಲ್ಲದಂತೆ ಕಾಳ ಸಂತೆಯಲ್ಲಿ ಮಾರಾಟ ಮಾಡಿದ್ದಾರೆ.
ಇದು ಸ್ವಾಮಿನಾಥ್ ಅವರನ್ನು ಕೆರಳಿಸಿದ್ದು, ಹೀಗಾಗಿ ರಾಷ್ಟ್ರಧ್ವಜ ಹಿಡಿದು 20 ಕಿಲೋಮೀಟರ್ ಅರೆಬೆತ್ತಲೆ ಪಾದಯಾತ್ರೆ ನಡೆಸಿ ತಮ್ಮ ಪಡಿತರ ಚೀಟಿಯನ್ನು ರದ್ದುಗೊಳಿಸುವಂತೆ ಸಾಗರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಮನವಿ ಸ್ವೀಕರಿಸಿದ ತಹಶೀಲ್ದಾರ್ ಮಲ್ಲೇಶ್ ಬಿ ಪೂಜಾರ್, ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರಲ್ಲದೆ ಸ್ವಾಮಿನಾಥ್ ಅವರಿಗೆ ಹೊಸ ಶರ್ಟ್ ಕೊಡಿಸಿ ಬಸ್ ಚಾರ್ಜ್ ಗೆ ಹಣ ನೀಡಿ ಕಳುಹಿಸಿಕೊಟ್ಟಿದ್ದಾರೆ.