ಸಮುದ್ರ ಕಂಡೊಡನೆ ಅದರ ಮುಂದೆ ಅಥವಾ ಸಮೀಪ ಮನೆ ಹೊಂದಿರಬೇಕೆಂದು ಬಯಸುವವರು ಸಾಕಷ್ಟು ಮಂದಿ ಸಿಗುತ್ತಾರೆ. ಆದರೆ ಎತ್ತರದ ಅಲೆಗಳು ಕಟ್ಟಡದ ಮೇಲ್ಭಾಗವನ್ನು ಸ್ಪರ್ಶಿಸುವ ಸ್ಥಳದಲ್ಲಿ ವಾಸಿಸಲು ಸಿದ್ಧವೇ? ಅದರಲ್ಲೂ ಅಲೆಯ ಆ ಭಯಾನಕ ದನಿ ಸದಾ ಕೇಳಿಕೊಂಡಿರಲು ಸಾಧ್ಯವೇ? ಆದರೆ ಪ್ರಪಂಚದಾದ್ಯಂತದ ಪ್ರವಾಸಿಗರು ಫ್ರಾನ್ಸ್ನ ಬಂದರು ನಗರವಾದ ಸೇಂಟ್-ಮಾಲೋದಲ್ಲಿ ವೀಕ್ಷಿಸಲು ಬರುವುದು ಇಂಥದ್ದೇ ಒಂದು ಕಾರಣಕ್ಕೆ.
ಸೇಂಟ್-ಮಾಲೋ ಮಧ್ಯಕಾಲೀನ ಫ್ರೆಂಚ್ ವಾಲ್ ನಗರವಾಗಿದ್ದು, ಇಂಗ್ಲಿಷ್ ಚಾನೆಲ್ (ಕೆನಾಲ್ ಡ ಮಂಚಾ) ದ ದಡದಲ್ಲಿರುವ ಬ್ರಿಟಾನಿ ಪ್ರದೇಶದಲ್ಲಿದೆ. ಕಡಲ್ಗಳ್ಳರು ಮತ್ತು ಸುಂದರವಾದ ಕಡಲತೀರಗಳಿಗೆ ಇದು ಹೆಸರುವಾಸಿಯಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿರುವ ವಿಡಿಯೋದಲ್ಲಿ ಕಂಡುಬರುವಂತೆಯೇ ಆಕರ್ಷಕ ನಗರವಾದ ಸೇಂಟ್-ಮಾಲೋ ಎತ್ತರದ ಅಲೆಗಳಿಗೆ ಸಾಕ್ಷಿಯಾಗಿದೆ. ಆಶ್ಚರ್ಯಕರವಾಗಿಯೂ ಇದೆ. ಈ ಸುಂದರವಾದ ಮತ್ತು ಭಯಾನಕ ವಿದ್ಯಮಾನವನ್ನು ಕಣ್ಣುತುಂಬಿಕೊಳ್ಳಲು ಪ್ರವಾಸಿಗರು ಯುರೋಪಿನಾದ್ಯಂತ ಇಲ್ಲಿಗೆ ಬರುತ್ತಾರೆ.
ವೈರಲ್ ಆಗಿರುವ ರೀಲ್ 30.4 ಮಿಲಿಯನ್ ವೀಕ್ಷಣೆಯಾಗಿದ್ದು, 1.12 ಮಿಲಿಯನ್ ಲೈಕ್ ಪಡೆದುಕೊಂಡಿದೆ. ಮಿರಾಕಲ್ ಆಫ್ ಸೌಂಡ್ ಹಾಡು ವಿಡಿಯೋವನ್ನು ಇನ್ನಷ್ಟು ಭಯಾನಕವಾಗಿಸುತ್ತದೆ ಎಂದು ಕೆಲವು ಜಾಲತಾಣ ಬಳಕೆದಾರರು ಗಮನಸೆಳೆದಿದ್ದಾರೆ.
ಸೇಂಟ್ ಮಾಲೋವನ್ನು ಕಡಲ್ಗಳ್ಳರ ನಗರ ಎಂದು ಕರೆಯಲಾಗುತ್ತದೆ, ಬೃಹತ್ ಗ್ರಾನೈಟ್ ವಾಲ್ ಐತಿಹಾಸಿಕ ಕೇಂದ್ರವನ್ನು ಸುತ್ತುವರೆದಿವೆ. ಇದು ಹಿಂದೆ ಕಡಲ್ಗಳ್ಳರಿಗೆ ಭದ್ರಕೋಟೆಯಾಗಿತ್ತು. ಅಲ್ಲಿ ಹಾದುಹೋಗುವ ವಿದೇಶಿ ಹಡಗುಗಳನ್ನು ಆಕ್ರಮಿಸಲು ದರೋಡೆಕೋರರು ಫ್ರಾನ್ಸ್ ರಾಜನಿಂದ ಅಧಿಕಾರ ಪಡೆದಿದ್ದರೆಂಬ ಮಾಹಿತಿಯೂ ಇದೆ.