ಆಂಧ್ರಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಮಹಿಳೆಯೊಬ್ಬಳು ತನ್ನ ವಿಧವೆ ಸೊಸೆಯ ತಲೆ ಕತ್ತರಿಸಿ ಕೊಂದಿದ್ದಾಳೆ. ಕತ್ತಿರಿಸಿದ ತಲೆಯೊಂದಿಗೆ 6 ಕಿ.ಮೀ. ದೂರದ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾಳೆ.
ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ರಾಯಚೋಟಿ ಪುರಸಭೆ ವ್ಯಾಪ್ತಿಯ ಕೊತಕೋಟ ರಾಮಪುರಂ ನಿವಾಸಿ ಸುಬ್ಬಮ್ಮ ಎಂಬ ಮಹಿಳೆ ತನ್ನ 35 ವರ್ಷದ ಸೊಸೆ ವಸುಂಧರಾಳನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾರೆ. ಆಸ್ತಿ ವಿವಾದದ ಕಾರಣದಿಂದ ಕೃತ್ಯವೆಸಗಿರುವುದಾಗಿ ಪೊಲೀಸ್ ಠಾಣೆಗೆ ಬಂದು ಶರಣಾದ ಸುಬ್ಬಮ್ಮ ತಿಳಿಸಿದ್ದಾಳೆ.
ತನ್ನ ಕೈಯಲ್ಲಿ ಕತ್ತರಿಸಿದ ತಲೆಯೊಂದಿಗೆ ಪೊಲೀಸ್ ಠಾಣೆಗೆ ಹೋಗುತ್ತಿರುವುದನ್ನು ನೋಡಿದ ಜನ ಬೆಚ್ಚಿಬಿದ್ದಿದ್ದಾರೆ. ಪೊಲೀಸ್ ಠಾಣೆ ಪ್ರವೇಶದ್ವಾರದಲ್ಲಿ ತಲೆ ಇಟ್ಟುಕೊಂಡು ಪೊಲೀಸರಿಗಾಗಿ ಸುಬ್ಬಮ್ಮ ಕಾಯುತ್ತಿದ್ದ ದೃಶ್ಯಗಳು ಸೆರೆಯಾಗಿವೆ.
ಅನ್ನಮಯ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರ್ಷವರ್ಧನ್ ರಾಜು ಅವರು ಮಾಹಿತಿ ನೀಡಿದ್ದು, ಆರೋಪಿಯು ತನ್ನ ಸೊಸೆಯೊಂದಿಗೆ ವ್ಯಕ್ತಿಯೊಬ್ಬನ ಜೊತೆಗಿನ ಅಕ್ರಮ ಸಂಬಂಧದ ಶಂಕೆಯಲ್ಲಿ ಜಗಳವಾಡಿದ್ದು, ನಂತರ ಆಕೆ ಸಿಟ್ಟಿನಿಂದ ವಸುಂಧರಾಳನ್ನು ಕೊಂದಿದ್ದಾಳೆ. ಮೃತ ಮಹಿಳೆ ಮತ್ತು ಆರೋಪಿ ಅತ್ತೆ ಇಬ್ಬರೂ ಒಂದೇ ಮನೆಯಲ್ಲಿ ವಾಸವಾಗಿದ್ದರು, ಮೃತರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಪತಿ ಮೃತಪಟ್ಟಿದ್ದಾರೆ, ಮೃತರು ಮಲ್ಲಿ ಎಂಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ. ಇದರಿಂದಾಗಿ ಕುಟುಂಬದಲ್ಲಿ ಜಗಳ ನಡೆಯುತ್ತಿತ್ತು ಎಂದು ಹೇಳಿದರು.
ತನ್ನ ಸೊಸೆಯು ತನಗಿರುವ ಆಸ್ತಿಯನ್ನು ತನ್ನ ಪರಮಾಪ್ತನಿಗೆ ನೀಡುತ್ತಾಳೆ. ಇದರಿಂದ ಅವಳ ಮೊಮ್ಮಗಳಿಗೆ ಅನ್ಯಾಯವಾಗುತ್ತದೆ ಎಂಬ ಭಯದಿಂದ ಸುಬ್ಬಮ್ಮ ಸೊಸೆಯನ್ನು ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.