ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಸಡಗರ ಮತ್ತು ಸಂಭ್ರಮದಿಂದ ಪ್ರತಿ ಮನೆಯಲ್ಲೂ ಆಗಸ್ಟ್ 13ರಿಂದ 15ರ ವರೆಗೆ ಮೂರು ದಿನಗಳ ತನಕ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಸ್ವಾತಂತ್ರ್ಯದ ನೆನಪುಗಳು, ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಕುಟುಂಬಗಳಿಗೆ ಗೌರವ ಸಮರ್ಪಿಸಲಾಗುತ್ತದೆ. ದೇಶ ಪ್ರೇಮದ ಸಂಕೇತವಾಗಿ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲೂ ಕೂಡ ಬಿಜೆಪಿ ನೇತೃತ್ವದಲ್ಲಿ ಹಬ್ಬದಂತೆ ‘ಹರ್ ಘರ್ ತಿರಂಗಾ’ ಹೆಸರಿನಲ್ಲಿ ಅಮೃತೋತ್ಸವವನ್ನು ನಡೆಸಲಾಗುವುದು. ಸಭೆ, ರ್ಯಾಲಿಗಳ ಮೂಲಕ ಸ್ವಾತಂತ್ರ್ಯದ ನೆನಪು ಮಾಡಿಕೊಳ್ಳಲಾಗುವುದು ಎಂದರು.
ಆ.13ರ ಬೆಳಿಗ್ಗೆಯಿಂದ 15ರ ಸಂಜೆಯವರೆಗೆ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಾಡುತ್ತದೆ. ಜಿಲ್ಲೆಯಲ್ಲಿ ಈಗಾಗಲೇ 4 ಲಕ್ಷ ಮನೆಗಳಿಗೆ ಧ್ವಜ ವಿತರಿಸಲಾಗಿದೆ. ಈ ಬಗ್ಗೆ ಯಾರೂ ರಾಜಕಾರಣ ಮಾಡಬಾರದು. ರಾಷ್ಟ್ರಪ್ರೇಮ ಎಲ್ಲರ ಕರ್ತವ್ಯ ಎಂದರು.
ಕೇಂದ್ರ ಸರ್ಕಾರ ದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸುಮಾರು 400 ಸ್ಥಳಗಳನ್ನು ಗುರುತಿಸಿದೆ. ನಮ್ಮ ಭಾಗ್ಯ ಇದರಲ್ಲಿ ಶಿಕಾರಿಪುರದ ಈಸೂರು ಗ್ರಾಮ ಕೂಡ ಸೇರಿಕೊಂಡಿದೆ. ಇದರ ನೆನಪಿಗಾಗಿ ಆಗಸ್ಟ್ 14ರಂದು ಮಧ್ಯಾಹ್ನ 2.30ಕ್ಕೆ ಈಸೂರಿನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಭಾಗವಹಿಸುತ್ತಾರೆ ಎಂದರು.