ಬೆಂಗಳೂರು: ಬೆಂಗಳೂರಿನ ಜಾರಿ ನಿರ್ದೇಶನಾಲಯ (ಇಡಿ) ಕಚೇರಿ ಬಳಿ ಕಾರಿಗೆ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಅವರಿಗೆ ನೋಟೀಸ್ ನೀಡಲಾಗಿದೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರಿಗೆ ಇಡಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಮೊಹಮ್ಮದ್ ನಲಪಾಡ್ ನೇತೃತ್ವದಲ್ಲಿ ಬೆಂಗಳೂರಿನ ಇಡಿ ಕಚೇರಿ ಮುಂದೆ ಕೆಲ ದಿನಗಳ ಹಿಂದೆ ಪ್ರತಿಭಟನೆ ನಡೆಸಿದ್ದರು. ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಇಡಿ ಕಚೇರಿ ಬಳಿ ಕಾರಿಗೆ ಬೆಂಕಿ ಹಚ್ಚಲಾಗಿತ್ತು. ರಸ್ತೆ ಮಧ್ಯೆಯೇ ಕಾರು ಹೊತ್ತಿ ಉರಿದಿತ್ತು. ಇದೀಗ ಈ ಪ್ರಕರಣ ಸಂಬಂಧ ನಲಪಾಡ್ ಗೆ ನೋಟೀಸ್ ನೀಡಲಾಗಿದೆ.
ವಿಲ್ಸನ್ ಗಾರ್ಡನ್ ಪೊಲೀಸರು ಇಂದು ಮೊಹಮ್ಮದ್ ನಲಪಾಡ್ ಗೆ ನೋಟೀಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.